ಪ್ರಧಾನಿ ಮೋದಿ ಭೇಟಿಗೆ ಮುನ್ನ ಎರಡನೇ ಬಾರಿ ಕೊಳಗೇರಿ ನೆಲಸಮ: 60 ಕುಟುಂಬಗಳು ಕಂಗಾಲು

Update: 2020-11-29 15:43 GMT

ಹೊಸದಿಲ್ಲಿ,ನ.29: ದೇವ ದೀಪಾವಳಿ ಸಂದರ್ಭದಲ್ಲಿ ತಮ್ಮ ಲೋಕಸಭಾ ಕ್ಷೇತ್ರವಾಗಿರುವ ವಾರಣಾಸಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯು ಕಳೆದ ಐದು ದಶಕಗಳಿಂದಲೂ ತಾತ್ಕಾಲಿಕ ಜೋಪಡಿಗಳಲ್ಲಿ ವಾಸವಿದ್ದ ಸುಮಾರು 60 ಕುಟುಂಬಗಳ ಪಾಲಿಗೆ ದುಃಸ್ವಪ್ನವಾಗಿ ಕಾಡಿದೆ. ಪ್ರಧಾನಿ ಮೋದಿ ಭೇಟಿಗೆ ಮುನ್ನ ಈ ಜೋಪಡಿಗಳನ್ನು ನೆಲಸಮಗೊಳಿಸಲಾಗಿದೆ. ನ.30ರಂದು ಪ್ರಧಾನಿಗಳ ಹೆಲಿಕಾಪ್ಟರ್ ಇಳಿಯಲಿರುವ ಗಂಗಾ ನದಿ ದಂಡೆಯ ಸುಜಾಬಾದ್ ಪ್ರದೇಶದಲ್ಲಿ ವಾಸವಿದ್ದ 250 ಜನರು ತಮ್ಮ ಜೋಪಡಿಗಳ ನೆಲಸಮದಿಂದಾಗಿ ಈ ವರ್ಷ ಎರಡನೇ ಸಲ ನಿರ್ವಸಿತರಾಗಿದ್ದಾರೆ. ಕಳೆದ ಫೆಬ್ರವರಿಯಲ್ಲಿ ದೀನದಯಾಳ ಉಪಾಧ್ಯಾಯ ಅವರ ಪ್ರತಿಮೆ ಅನಾವರಣಕ್ಕಾಗಿ ಮೋದಿ ವಾರಣಾಸಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಅಧಿಕಾರಶಾಹಿಯ ಅಸಡ್ಡೆಯಿಂದಾಗಿ ಇದೇ ದುಸ್ಥಿತಿಯನ್ನು ಈ ನತದೃಷ್ಟರು ಅನುಭವಿಸಿದ್ದರು.

ಈ ಪೈಕಿ ಹೆಚ್ಚಿನವರು ದಲಿತ ವರ್ಗದ ಧಾರ್ಕರ್ ಅಥವಾ ಬಾನ್ಸ್‌ಫರ್ ಸಮುದಾಯಗಳಿಗೆ ಸೇರಿದವರಾಗಿದ್ದು,ತಮಗೆ ನೆನಪಿರುವಾಗಿನಿಂದಲೂ ಈ ಕೊಳಗೇರಿಯಲ್ಲಿ ವಾಸವಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಹೊಟ್ಟೆ ತುಂಬಿಸಿಕೊಳ್ಳಲು ಬಾಂಬೂ ಉತ್ಪನ್ನಗಳನ್ನು,ವಿಶೇಷವಾಗಿ ಬುಟ್ಟಿಗಳು ಮತ್ತು ಕೈ ಬೀಸಣಿಕೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

‘ನಾನು ಹುಟ್ಟಿದ್ದು ಇಲ್ಲಿಯೇ. ನನ್ನ ಮತದಾರರ ಗುರುತಿನ ಚೀಟಿ,ಆಧಾರ್ ಎಲ್ಲವೂ ಇಲ್ಲಿಯೇ ನೋಂದಣಿಯಾಗಿವೆ. ಆದರೂ ಪ್ರತಿ ಬಾರಿಯೂ ಗಣ್ಯರ ಆಗಮನವಾದಾಗ ಪೊಲೀಸರು ಯಾವುದೇ ಸೂಚನೆ ನೀಡದೆ ಮೊದಲು ನಮ್ಮ ಜೋಪಡಿಗಳ ಮೇಲೆ ದಾಳಿ ನಡೆಸುತ್ತಾರೆ. ನಾವು ಪೊಲೀಸರ ಕೃಪೆಯಲ್ಲಿ ಬದುಕುವಂತಾಗಿದೆ ’ಎಂದು ಕೊಳಗೇರಿಯ ನಿವಾಸಿ ರಾಮವಿಲಾಸ್ ಅಳಲು ತೋಡಿಕೊಂಡರು.

ತಮ್ಮ ಜೋಪಡಿಗಳು ನೆಲಸಮಗೊಂಡಾಗಿನಿಂದ ಇಲ್ಲಿಯ ನಿವಾಸಿಗಳು ಬಯಲಿನಲ್ಲಿ ತೀವ್ರ ಚಳಿಯ ನಡುವೆ ವಾಸವಿದ್ದಾರೆ. ಕೆಲವರು ಸಮೀಪದ ಗ್ರಾಮಗಳಲ್ಲಿ ಅಥವಾ ನೆರೆಹೊರೆಯ ದೇವಸ್ಥಾನಗಳಲ್ಲಿ ಆಶ್ರಯ ಪಡೆದಿದ್ದಾರೆ.

ಈ ಕೊಳಗೇರಿಯು ಡುಮ್ರಿ-ಪಡಾವ್ ಹೆಲಿಪ್ಯಾಡ್ ರಸ್ತೆಯಲ್ಲಿದೆ. ಹೀಗಾಗಿ ಪ್ರತಿ ಬಾರಿ ಪ್ರಧಾನಿ ಇಲ್ಲಿ ಇಳಿದಾಗಲೂ ಅಧಿಕಾರಿಗಳು ಇಲ್ಲಿಯ ಜೋಪಡಿಗಳನ್ನು ನೆಲಸಮಗೊಳಿಸುತ್ತಾರೆ.

ಸ್ಥಳೀಯ ರಾಜಕೀಯ ಧುರೀಣರು ಮತ್ತು ಅಧಿಕಾರಿಗಳೂ ಈ ಕೊಳಗೇರಿ ನಿವಾಸಿಗಳ ಬೆಂಬಲಕ್ಕೆ ನಿಂತಿಲ್ಲ.

‘ಇಲ್ಲಿಯ ಜನರು ನಿರ್ವಸಿತಗೊಂಡರೆ ಅವರಿಗೆ ಪುನರ್ವಸತಿ ಕಲ್ಪಿಸುವಂತೆ ನಾವು ಎಲ್ಲ ಅಧಿಕಾರಿಗಳಿಗೂ ಮನವಿ ಮಾಡಿದ್ದೇವೆ. ಆದರೆ ನಮ್ಮನ್ನು ಯಾರೂ ಭೇಟಿಯಾಗಿಲ್ಲ. ಉಪವಿಭಾಗಾಧಿಕಾರಿಗಳು ಒಂದು ದಿನ ಸಮಯವನ್ನು ನೀಡಿದ್ದರಾದರೂ ಅವರೂ ನಮ್ಮನ್ನು ಭೇಟಿಯಾಗಲಿಲ್ಲ. ಜಿಲ್ಲಾಡಳಿತಕ್ಕೆ ನಾವು ಹಲವಾರು ಪತ್ರಗಳನ್ನು ಬರೆದಿದ್ದರೂ ಒಂದಕ್ಕೂ ಉತ್ತರವಿಲ್ಲ’ ಎಂದು ಆರೋಗ್ಯ ಮತ್ತು ನೈರ್ಮಲ್ಯ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಎನ್‌ಜಿಒ ಇನ್ನರ್ ವಾಯ್ಸ್ ಫೌಂಡೇಷನ್‌ನ ಸೌರಭ್ ಸಿಂಗ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News