ಜಿಎಚ್‌ಎಂಸಿ ಚುನಾವಣೆ: ಬಿರುಸಿನ ಪ್ರಚಾರಕ್ಕೆ ಅಂತ್ಯ

Update: 2020-11-29 16:02 GMT

ಹೈದರಾಬಾದ್, ನ.29: ಬೃಹತ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್‌ಎಂಸಿ)ಯ ಚುನಾವಣೆಗಾಗಿ ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರಕ್ಕೆ ರವಿವಾರ ಸಂಜೆ ತೆರೆಬಿದ್ದಿದ್ದು,ಡಿ.1ರ ಮತದಾನಕ್ಕೆ ವೇದಿಕೆ ಸಜ್ಜುಗೊಂಡಿದೆ.

24 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿರುವ ಜಿಎಚ್‌ಎಂಸಿಯ 150 ವಾರ್ಡ್‌ಗಳಿಗಾಗಿ 1,122 ಅಭ್ಯರ್ಥಿಗಳು ಕಣದಲ್ಲಿದ್ದು,74.67 ಲಕ್ಷ ಮತದಾರರು ಇವರ ಹಣೆಬರಹವನ್ನು ನಿರ್ಧರಿಸಲಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪಕ್ಷದ ಹಿರಿಯ ನಾಯಕರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರೆ, ಟಿಆರ್‌ಎಸ್‌ನ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಅವರು ತನ್ನ ಪಕ್ಷದ ಪ್ರಚಾರದ ಹೊಣೆಗಾರಿಕೆಯನ್ನು ವಹಿಸಿದ್ದರು.

ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಉತ್ತಮಕುಮಾರ್ ರೆಡ್ಡಿ ಮತ್ತು ಹಿರಿಯ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರೆ,ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಮತ್ತು ಅವರ ಸೋದರ ಹಾಗೂ ಶಾಸಕ ಅಕ್ಬರುದ್ದೀನ್ ಉವೈಸಿ ಹಲವಾರು ರ್ಯಾಲಿಗಳಲ್ಲಿ ಪಾಲ್ಗೊಂಡಿದ್ದರು.

ನ.28ರಂದು ಇಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ನಗರದ ಅಭಿವೃದ್ಧಿಗಾಗಿ ತನ್ನ ಪಕ್ಷದ ಬದ್ಧತೆಗಳನ್ನು ಪ್ರಮುಖವಾಗಿ ಬಿಂಬಿಸಿದ್ದರು.

ಕೇಂದ್ರ ಸಚಿವರಾದ ಅಮಿತ್ ಶಾ, ಸ್ಮೃತಿ ಇರಾನಿ ಮತ್ತು ಕಿಶನ್ ರೆಡ್ಡಿ,ಉ.ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಿಜೆಪಿಯ ಪ್ರಮುಖ ನಾಯಕರಲ್ಲಿ ಸೇರಿದ್ದು, ಟಿಆರ್‌ಎಸ್‌ನ ‘ಕುಟುಂಬ ಆಡಳಿತ ’ ಮತ್ತು ಎಐಎಂಐಎಂ ಜೊತೆ ‘ರಹಸ್ಯ ’ಒಪ್ಪಂದದ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದರು.

ಟಿಆರ್‌ಎಸ್ ಮತ್ತು ಬಿಜೆಪಿ ನಾಯಕರ ನಡುವಿನ ವಾಗ್ಯುದ್ಧಕ್ಕೆ ಪ್ರಚಾರ ಅಭಿಯಾನವು ಸಾಕ್ಷಿಯಾಗಿತ್ತು.

ರವಿವಾರ ಇಲ್ಲಿ ರೋಡ್ ಶೋ ನಡೆಸಿದ ಶಾ ಆಡಳಿತಾರೂಢ ಟಿಆರ್‌ಎಸ್ ವಿರುದ್ಧ ತೀವ್ರ ದಾಳಿಯನ್ನು ನಡೆಸಿದರು. ಟಿಆರ್‌ಎಸ್ ವಿರುದ್ಧ ಮತ್ತು ಅದರೊಂದಿಗೆ ಉವೈಸಿ ಮೈತ್ರಿಯ ವಿರುದ್ಧ ತೆಲಂಗಾಣದ ಜನತೆ ತೀವ್ರ ಆಕ್ರೋಶಗೊಂಡಿದ್ದಾರೆ ಎಂದರು. ಮಹಾ ನಗರಪಾಲಿಕೆ ಚುನಾವಣೆಯಲ್ಲಿ ಮೇಯರ್ ಸ್ಥಾನವನ್ನು ತನ್ನ ಪಕ್ಷವು ಗೆದ್ದ ಬಳಿಕ ರೋಹಿಂಗ್ಯಾಗಳು ಮತ್ತು ಪಾಕಿಸ್ತಾನಿಗಳನ್ನು ಹೊರಗಟ್ಟಲು ತನ್ನ ಪಕ್ಷವು ಹಳೆಯ ನಗರದಲ್ಲಿ ‘ಸರ್ಜಿಕಲ್ ದಾಳಿ ’ಯನ್ನು ನಡೆಸಲಿದೆ ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಸಂಜಯ್ ಅವರು ವಿವಾದದಲ್ಲಿ ಸಿಲುಕಿದ್ದಾರೆ.

 ಚುನಾವಣೆಗಾಗಿ 51,000ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ತೆಲಂಗಾಣ ಡಿಜಿಪಿ ಮಹೇಂದ್ರ ರೆಡ್ಡಿ ತಿಳಿಸಿದ್ದಾರೆ. ಡಿ.4ರಂದು ಮತಗಳ ಎಣಿಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News