ಜೆರುಸಲೇಂ: ನೆತನ್ಯಾಹು ವಿರುದ್ಧ ಬೃಹತ್ ಪ್ರತಿಭಟನೆ

Update: 2020-11-29 17:19 GMT

ಜೆರುಸಲೇಂ,ನ.29: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ರಾಜೀನಾಮೆಗೆ ಆಗ್ರಹಿಸಿ ಜೆರುಸಲೇಂನಲ್ಲಿರುವ ಅವರ ಅಧಿಕೃತ ನಿವಾಸದ ಮುಂದೆ ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನಕಾರರು ಶನಿವಾರ ರಾತ್ರಿ ಬೃಹತ್ ಧರಣಿ ನಡೆಸಿದರು. ಭ್ರಷ್ಟಾಚಾರ ಹಾಗೂ ಕೊರೋನ ವೈರಸ್ ಸೋಂಕು ನಿರ್ವಹಣೆಯಲ್ಲಿ ವೈಫಲ್ಯದ ಹೊಣೆಹೊತ್ತು ನೆತನ್ಯಾಹು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿವಿಧ ಮಾನವಹಕ್ಕು ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಕಳೆದ ಒಂದು ತಿಂಗಳಿನಿಂದ ಅಭಿಯಾನವನ್ನು ನಡೆಸುತ್ತಿದ್ದಾರೆ.

 ಕೊರೋನ ವೈರಸ್ ಲಾಕ್‌ಡೌನ್ ಬಳಿಕ ಇತ್ತೀಚಿನ ತಿಂಗಳುಗಳಲ್ಲಿ ಉದ್ಯೋಗಗಳನ್ನು ಕಳೆದುಕೊಂಡ ಹಲವಾರು ಇಸ್ರೇಲಿ ನಾಗರಿಕರು ಕೂಡಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 ಪ್ರತಿಭಟನಕಾರರಲ್ಲಿ ಬಹುತೇಕ ಮಂದಿ ಇಸ್ರೇಲಿ ಹಾಗೂ ಚಳವಳಿಯ ಸಂಕೇತವಾಗಿ ಗುಲಾಬಿ ಬಣ್ಣದ ಧ್ವಜಗಳನ್ನು ಹಿಡಿದಿದ್ದರು. ನೆತನ್ಯಾಹು ಅವರ ಹಲವಾರು ಸಹವರ್ತಿಗಳು ಆರೋಪಿಗಳಾಗಿರುವ ಜರ್ಮನ್ ಜಲಾಂತರ್ಗಾಮಿ ಖರೀದಿ ಹಗರಣವನ್ನು ನೆನಪಿಸಲು ಕೆಲವರು ಸಬ್‌ಮೆರೀನ್‌ನ ಪ್ರತಿಕೃತಿಗಳನ್ನು ತೂಗುಹಾಕಿದ್ದರು.

 ಈ ಮಧ್ಯೆ ನೆತನ್ಯಾಹು ವಿರುದ್ಧ ಇಸ್ರೇಲ್‌ನ ವಿವಿಧ ನಗರಗಳಲ್ಲಿಯೂ ಪ್ರತಿಭಟನೆಗಳು ನಡೆದಿರುವ ಬಗ್ಗೆ ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News