ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಸಭೆಗೆ ಪ್ರಮೋದ್ ಮಧ್ವರಾಜ್ ಗೈರು

Update: 2020-11-29 17:50 GMT

ಉಡುಪಿ, ನ.29: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ರವಿವಾರ ನಡೆದ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ಕಾಂಗ್ರೆಸ್ ಭವನದಲ್ಲಿ ನಡೆದ ಪ್ರಮುಖ ಸಭೆಯಲ್ಲೂ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೈರು ಹಾಜರಾಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಸಮಾವೇಶ ಸ್ಥಳದಲ್ಲಿ ಪ್ರಮೋದ್ ಬೆಂಬಲಿಗರು ಮೌನ ಪ್ರತಿಭಟನೆ ನಡೆಸುವ ಮೂಲಕ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತಿಳಿಸಲು ಸಿದ್ಧತೆ ನಡೆಸಿದ್ದರು. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷರು ಸಮಾವೇಶದಲ್ಲಿ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.

''ಪಕ್ಷ ಇಲ್ಲದೆ ನಾವು ಯಾರು ಕೂಡ ಅಧಿಕಾರ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ನಾವು ಮೊದಲು ಪಕ್ಷವನ್ನು ಸರಿಪಡಿಸಬೇಕಾಗಿದೆ. ಭಿನ್ನಾಭಿಪ್ರಾಯ ಎಂಬುದು ಎಲ್ಲ ಕಡೆಗಳಲ್ಲಿ ಇರುತ್ತದೆ. ಯಾವುದೇ ಸಮಸ್ಯೆ ಇದ್ದರೆ ನಮ್ಮಲ್ಲಿ ಹೇಳಿಕೊಂಡರೆ ಅದನ್ನು ಸರಿಪಡಿಸಲು ನಾವು ಸಿದ್ಧರಿದ್ದೇವೆ. ಅದು ಬಿಟ್ಟು ಬ್ಲಾಕ್ ಮೇಲ್ ಮಾಡಿಕೊಂಡು ನನ್ನಿಂದಲೇ ಪಕ್ಷ ಎಂಬುದು ತಿಳಿದುಕೊಳ್ಳುವುದು ಕೇವಲ ಭ್ರಮೆ. ಯಾರು ಇಲ್ಲದಿದ್ದರೂ ಪಕ್ಷ ಮುಂದುವರೆಯುತ್ತದೆ'' ಎಂದು ಡಿ.ಕೆ.ಶಿವಕುಮಾರ್ ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದರು.

''ಕೇವಲ ಒಂದು ಜಾತಿ ಮತ್ತು ಧರ್ಮದ ಮೇಲೆ ಕಾಂಗ್ರೆಸ್ ಪಕ್ಷ ನಿಂತಿಲ್ಲ. ಈ ಪಕ್ಷ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತದೆ. ನಮ್ಮಲ್ಲಿ ಪ್ರಥಮವಾಗಿ ಶಿಸ್ತು ಇರಬೇಕು. ಯಾವುದೇ ಸಮಸ್ಯೆಗಳಿದ್ದರೂ ಕುಳಿತು ಚರ್ಚೆ ಮಾಡಿ ಬಗೆಹರಿಸಬೇಕು. ಉಡುಪಿ ಜಿಲ್ಲೆ ಯಲ್ಲಿ ಒಂದೇ ಒಂದು ಶಾಸಕರಿಲ್ಲ. ನಾವು ಹೀಗೆ ಕಿತ್ತಾಡುತ್ತಿದ್ದರೆ ಕಾರ್ಯಕರ್ತರ ಪರಿಸ್ಥಿತಿ ಏನಾಗಬೇಕು. ಎಲ್ಲಿ ಶ್ರಮ, ತ್ಯಾಗ ಇರುತ್ತದೆಯೋ ಅಲ್ಲಿ ಫಲ ಸಿಗುತ್ತದೆ'' ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News