ಉಡುಪಿಯಲ್ಲಿ ಎಚ್‌ಐವಿ ಸೋಂಕಿತ 26 ಮಂದಿಗೆ ಕೊರೋನ, 23 ಮಂದಿ ಗುಣಮುಖ: ಮೂವರು ಮೃತ್ಯು; ಡಾ.ಚಿದಾನಂದ ಸಂಜು

Update: 2020-11-30 14:15 GMT

ಉಡುಪಿ, ನ.30: ಉಡುಪಿ ಜಿಲ್ಲೆಯಲ್ಲಿ ಕೋವಿಡ್-19ನಿಂದ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾದ ಮುಂಬೈಯಿಂದ ಆಗಮಿಸಿದವರು ಸೇರಿದಂತೆ ಎಲ್ಲರನ್ನು ಎಚ್‌ಐವಿ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೇಳೆ ಮುಂಬೈಯ ಇಬ್ಬರು ಸೇರಿದಂತೆ ಒಟ್ಟು ಮೂವರಲ್ಲಿ ಎಚ್‌ಐವಿ ಪಾಸಿಟಿವ್ ಪತ್ತೆಯಾಗಿವೆ. ಅದರಲ್ಲಿ ಒಂದು ಹೊಸ ಪ್ರಕರಣ ಆಗಿವೆ ಎಂದು ಉಡುಪಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಎಸ್.ವಿ. ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ ಎಚ್‌ಐವಿ ಸೋಂಕಿತರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ 23 ಮಂದಿಯಲ್ಲಿ ಕೋವಿಡ್-19 ಪತ್ತೆ ಯಾಗಿತ್ತು. ಕೋವಿಡ್ -19ಗೆ ಚಿಕಿತ್ಸೆ ಪಡೆದ ಎಚ್‌ಐವಿ ಸೋಂಕಿತರ ಪೈಕಿ ಮೂವರು ಮೃತಪಟ್ಟಿದ್ದು, ಉಳಿದ 23 ಮಂದಿ ಗುಣಮುಖರಾಗಿದ್ದಾರೆ. ಮೃತರಲ್ಲಿ ಇಬ್ಬರು ಮುಂಬೈಯಿಂದ ಆಗಮಿಸಿದವರಾಗಿದ್ದಾರೆ ಎಂದರು.

83 ಸೋಂಕಿತರು ಮೃತ್ಯು

ಕೊರೋನಾದಿಂದಾಗಿ ಜಿಲ್ಲೆಯಲ್ಲಿ ಈ ಬಾರಿ ಎಚ್‌ಐವಿ ಪರೀಕ್ಷೆಯ ಪ್ರಮಾಣ ತೀರಾ ಕಡಿಮೆಯಾಗಿದ್ದು, 2020ರ ಎಪ್ರಿಲ್‌ನಿಂದ- ಅಕ್ಟೋಬರ್ ವರೆಗೆ 17410 ಮಂದಿಯನ್ನು ಪರೀಕ್ಷೆಗೆ ಒಳಪಡಿಸುವ ಮೂಲಕ ಶೇ.31ರಷ್ಟು ಸಾಧನೆ ಮಾಡಲಾಗಿದೆ. ಇದರಲ್ಲಿ 76(ಶೇ.0.43) ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ವರ್ಷ ಜಿಲ್ಲೆಯಲ್ಲಿ ಒಟ್ಟು 83 ಮಂದಿ ಎಚ್‌ಐವಿ ಸೋಂಕಿ ತರು ಮರಣ ಹೊಂದಿದ್ದಾರೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳವರೆಗೆ 10171 ಮಂದಿ ಗರ್ಭಿಣಿಯರನ್ನು ಎಚ್‌ಐವಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರೊಂದಿಗೆ ಶೇ.51.06 ಸಾಧನೆ ಮಾಡಲಾಗಿದೆ. ಒಟ್ಟು 6(ಶೇ.0.05) ಮಂದಿ ಗರ್ಭಿಣಿಯರಲ್ಲಿ ಪಾಸಿಟಿವ್ ಕಂಡುಬಂದಿದೆ. ಈ ಬಾರಿ ಕೋವಿಡ್-19 ಮತ್ತು ಗರ್ಭಿಣಿಯರ ದಾಖಲಾತಿ ಕಡಿಮೆ ಆಗಿರುವ ಕಾರಣದಿಂದಾಗಿ ಎಚ್‌ಐವಿ ಪರೀಕ್ಷೆ ಕೂಡ ತೀರಾ ಕಡಿಮೆ ಆಗಿದೆ ಎಂದು ಅವರು ಹೇಳಿದರು.

11, 378ಯುನಿಟ್ ರಕ್ತ ಸಂಗ್ರಹ

ಗರ್ಭಿಣಿ ತಾಯಿಯಿಂದ ಮಗುವಿಗೆ ಎಚ್‌ಐವಿ ಸೋಂಕು ಹರಡದಂತೆ ತಡೆಯಲು ಚಿಕಿತ್ಸೆ ಲಭ್ಯ ಇದ್ದು, ಇದರಿಂದ ಜಿಲ್ಲೆಯಲ್ಲಿ 2015ರಿಂದ ತಾಯಿ ಯಿಂದ ಮಗುವಿಗೆ ಸೋಂಕು ಹರಡಿರುವ ಒಂದೇ ಒಂದು ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿರುವ ಮೂರು ರಕ್ತನಿಧಿ ಕೇಂದ್ರದಲ್ಲಿ 2020ರ ಅಕ್ಟೋಬರ್‌ವರೆಗೆ 11378 ಮಂದಿ ರಕ್ತದಾನ ಮಾಡಿದ್ದು, ಅವರಿಂದ 11378 ಯುನಿಟ್ ರಕ್ತ ಸಂಗ್ರಹಿಸಲಾಗಿದೆ. ಈ ಮೂಲಕ ಶೇ.87ರಷ್ಟು ಸಾಧನೆ ಮಾಡಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲೂ ಸ್ವಯಂಸೇವಕರು ರಕ್ತದಾನ ಮಾಡಿರುವುದು ಶ್ಲಾಘ ನೀಯ ಕಾರ್ಯ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ, ವಿಶೇಷ ಅಧಿಕಾರಿ ಡಾ.ಪ್ರೇಮಾನಂದ ಉಪಸ್ಥಿತರಿದ್ದರು.

3,763 ಸೋಂಕಿತರಿಗೆ ಚಿಕಿತ್ಸೆ

ಜಿಲ್ಲೆಯ ಉಡುಪಿ ಮತ್ತು ಕುಂದಾಪುರದಲ್ಲಿರುವ ಎಆರ್‌ಟಿ ಚಿಕಿತ್ಸಾ ಕೇಂದ್ರ ದಲ್ಲಿ ಒಟ್ಟು 3763 ಮಂದಿ ಎಚ್‌ಐವಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 143 ಮಕ್ಕಳು ಸೇರಿದ್ದಾರೆ. ಉಡುಪಿ ಕೇಂದ್ರದಲ್ಲಿ 2594 ಮತ್ತು ಕುಂದಾಪುರದಲ್ಲಿ 1169 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಾ.ಚಿದಾನಂದ ಸಂಜು ಎಸ್.ವಿ. ತಿಳಿಸಿದರು.

ಎಚ್‌ಐವಿ ಪೀಡಿತರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರಿಗೆ ಸೋಂಕು ಬಹುಬೇಗನೆ ಹರಡುವ ಸಾಧ್ಯತೆಗಳು ಹೆಚ್ಚು. ಆ ಕಾರಣಕ್ಕಾಗಿ ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಜಿಲ್ಲೆಯ ಎಚ್‌ಐವಿ ಸೋಂಕಿತರು ಮನೆಯಿಂದ ಹೊರಬಾರದಂತೆ ಅವರ ಮನೆಗಳಿಗೆ ಔಷಧಿಗಳನ್ನು ತಲುಪಿಸುವ ಕಾರ್ಯ ಮಾಡಲಾಗಿದೆ ಎಂದರು.

ಕ್ಷಯ ರೋಗ ಪ್ರಕರಣ ಇಳಿಮುಖ

ಉಡುಪಿ ಜಿಲ್ಲೆಯಲ್ಲಿ ಕ್ಷಯ ರೋಗ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಪ್ರತಿವರ್ಷ 1700-2000 ಕ್ಷಯ ರೋಗ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತದೆ. ಆದರೆ ಈ ಬಾರಿ ಜಿಲ್ಲೆಯಲ್ಲಿ 895 ಪ್ರಕರಣಗಳು ಮಾತ್ರ ಕಂಡುಬಂದಿದೆ. ಇದಕ್ಕೆ ಲಾಕ್‌ಡೌನ್, ಕಡಿಮೆ ಪರೀಕ್ಷೆ ಮತ್ತು ಮಾಸ್ಕ್ ಧರಿಸಿರುವುದು ಕೂಡ ಕಾರಣ ಇರಬಹುದು ಎಂದು ಡಾ.ಚಿದಾನಂದ ಸಂಜು ಎಸ್.ವಿ. ತಿಳಿಸಿದರು.

ಕ್ಷಯ ರೋಗಿಗಳ ಬಳಿಗೆ ಹೋಗಿ ಪರೀಕ್ಷೆ ಮಾಡುವ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಡಿ.1ರಿಂದ 31ರವರೆಗೆ ಹಮ್ಮಿಕೊಳ್ಳಲಾಗಿದೆ. ಅದರಂತೆ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಿರುವ 1,27,235 ಮಂದಿಯ ಮನೆಮನೆಗೆ ಭೇಟಿ ನೀಡಿ ಕ್ಷಯ ರೋಗದ ಲಕ್ಷಣ ಇರುವ ಬಗ್ಗೆ ತಪಾಸಣೆ ಮಾಡಿ, ಇದ್ದರೆ ಅವರ ಕಫ ವನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News