ಬಾಜೆ ಪೆರ್ಲದಲ್ಲಿ ಮೊಬೈಲ್ ಟವರ್ ಸಮಸ್ಯೆ ಬಗೆಹರಿಸಲು ಒತ್ತಾಯ

Update: 2020-11-30 12:47 GMT

ಮಂಗಳೂರು, ನ.30: ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಪೆರ್ಲ ಪರಿಸರದಲ್ಲಿ ಮೊಬೈಲ್ ಟವರ್ ಇಲ್ಲದ ಕಾರಣ ಇಲ್ಲಿನ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಳ್ಳಲು ನೆಟವರ್ಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಕೊರೋನ ಆರಂಭವಾದ ಬಳಿಕ ಇಲ್ಲಿನ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಆನ್‌ಲೈನ್ ಶಿಕ್ಷಣದಿಂದ ವಂಚಿತಾಗುವಂತಾಗಿದೆ. ಆದ್ದರಿಂದ ಈ ಭಾಗದಲ್ಲಿ ಸೂಕ್ತ ಮೊಬೈಲ್ ಟವರ್ ಕಲ್ಪಿಸಬೇಕು ಎಂದು ನಮ್ಮ ಪೆರ್ಲ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸಂಚಾಲಕ ಮಾಧವ ಗೌಡ ಖಂಡಿಗ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ವಿದ್ಯಾರ್ಥಿಗಳು ಅದರಲ್ಲೂ ವಿದ್ಯಾರ್ಥಿನಿಯರು ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಳ್ಳಲು ಮೂರು ಕಿ.ಮೀ. ನಡೆದು ಹೋಗಬೇಕಾದ ಸ್ಥಿತಿ ಇದೆ. ರಾತ್ರಿ ವೇಳೆ ಏನಾದರೂ ಅವಘಡ ಸಂಭವಿಸಿದರೆ ತುರ್ತಾಗಿ ಯಾರನ್ನಾದರೂ ಸಂಪರ್ಕಿಸಬೇಕೆಂದರೂ ಇಲ್ಲಿ ನೆಟವರ್ಕ್ ದೊರೆಯುವುದಿಲ್ಲ ಎಂದು ಅಲ್ಲಿನ ಸಮಸ್ಯೆಯನ್ನು ವಿವರಿಸಿದರು.

ಏರ್‌ಟೆಲ್ ಸಂಸ್ಥೆಯವರು ಪೆರ್ಲದಲ್ಲಿ ಟವರ್ ಹಾಕಲು ಮುಂದೆ ಬಂದಿದ್ದರು. ಆದರೆ ಸ್ಥಳೀಯ ಉದ್ಯಮಿಯೊಬ್ಬರ ಪಿತೂರಿಯಿಂದ ಅವರ ವ್ಯಾಪ್ತಿಗೆ ನೆಟ್ವರ್ಕ್ ಸಿಗುವಂತೆ ಮಾಡಿ ಟವರ್ ನಿರ್ಮಿಸಿದ್ದಾರೆ. ಪೆರ್ಲ ಪರಿಸರದ 190 ಮನೆಗಳು ಈ ಡಿಜಿಟಲ್ ಯುಗದಲ್ಲೂ ಅಂಧಕಾರದಲ್ಲಿವೆ. ಏರ್‌ಟೆಲ್ ಅಧಿಕಾರಿಗಳು ಈ ಪರಿಸರದ ಜನತೆಗೆ ಅನುಕೂಲವಾಗುವಂತೆ ಮತ್ತೊಂದು ಟವರ್ ನಿರ್ಮಿಸಲು ಮುಂದಾಗಬೇಕು ಎಂದು ಮಾಧವಗೌಡ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ನಮ್ಮ ಪೆರ್ಲ ಹಿತರಕ್ಷಣಾ ವೇದಿಕೆಯ ವೇದಿಕೆಯ ಪ್ರಮುಖರಾದ ಸಿ.ಎಂ.ಜಾರ್ಜ್, ಪಿ.ಎನ್.ಚಿದಾನಂದ, ಬಾಲಕೃಷ್ಣ ಪೂಜಾರಿ, ಚರಣ್ ರಾಜ್ ಬಲ್ಲಡ್ಕ, ಯೋಗೀಶ್ ಗೌಡ ನೆಕ್ಕರ್ತಿಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News