ಕೋವಿಡ್ 2ನೇ ಅಲೆ ತಡೆಯಲು ಕಟ್ಟುನಿಟ್ಟಿನ ಕ್ರಮ: ಜಿಲ್ಲಾಧಿಕಾರಿ ಜಿ.ಜಗದೀಶ್

Update: 2020-11-30 12:50 GMT

ಉಡುಪಿ, ನ.30: ಕೇರಳ ಸೇರಿದಂತೆ ದೇಶದ ಕೆಲವು ರಾಜ್ಯಗಳಲ್ಲಿ ಕೋವಿಡ್‌ನ ಎರಡನೇ ಅಲೆ ಕಂಡುಬಂದಿದ್ದು, ಹೀಗಾಗಿ ಜಿಲ್ಲೆಯಲ್ಲಿ ಕೋವಿಡ್‌ನ ಎರಡನೇ ಅಲೆ ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದು ಕೊಳ್ಳಲಾಗುವುದು. ಸಾರ್ವಜನಿಕರು ಹಾಗೂ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ನಿಗಾವಹಿಸಿ, ಸರಕಾರದ ಕೋವಿಡ್ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಕೋವಿಡ್ ಎರಡನೇ ಅಲೆ ಉಡುಪಿ ಜಿಲ್ಲೆಯಲ್ಲಿ ಬಾರದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಜಿಪಂ ಸಭಾಂಗಣದಲ್ಲಿ ಇಂದು ಕರೆದ ತಜ್ಞರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯರುಗಳ ಸಭೆಯ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.

ಸಾರ್ವಜನಿಕರ ತಲೆಯಿಂದ ‘ಕೋವಿಡ್ ಭೀತಿ’ ಈಗಾಗಲೇ ಹೋಗಿಬಿಟ್ಟಿದೆ. ಅವರ ‘ನಡೆ-ನುಡಿ’ಗಳಿಂದ ಅದು ವೇದ್ಯವಾಗುತ್ತದೆ. ಕೋವಿಡ್ ಬಗ್ಗೆ ಮೊದಲಿನ ಆತಂಕ ಅವರಲ್ಲಿ ಕಂಡುಬರುತ್ತಿಲ್ಲ. ಹೀಗಾಗಿ ಮಾಸ್ಕ್ ಧರಿಸುವುದು, ಸುರಕ್ಷತಾ ಅಂತರ ಕಾಪಾಡುವುದು, ಸ್ಯಾನಿಟೈಸ್ ಬಳಸುವ ಬಗ್ಗೆ ಅವರಲ್ಲಿ ನಿರ್ಲಕ್ಷತನ ಕಾಣಿಸುತ್ತಿದೆ. ಇದು ಅಪಾಯಕಾರಿ. ಎರಡನೇ ಅಲೆ ಮತ್ತೆ ಪ್ರಾರಂಭಗೊಳ್ಳಲು ಇಂದು ಕಾರಣವಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇದೇ ಡಿಸೆಂಬರ್ ಅಂತ್ಯದವರೆಗೆ ಕೇಂದ್ರ ಸರಕಾರದ ಕೋವಿಡ್ ಮಾರ್ಗಸೂಚಿ ಮುಂದುವರಿಯಲಿದೆ. ಜಿಲ್ಲೆಯ ಪ್ರತಿಯೊಬ್ಬರು ಇದನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಅಧಿಕಾರಿಗಳು ಕೋವಿಡ್ ಮಾರ್ಗಸೂಚಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಆದರೆ ಈ ಎರಡೂ ಈಗ ನಡೆಯುತ್ತಿಲ್ಲ. ಮಾರ್ಗಸೂಚಿಯ ಉಲ್ಲಂಘನೆ ಎಲ್ಲಾ ಕಡೆ ಕಂಡುಬರುತ್ತಿದೆ ಎಂದವರು ಹೇಳಿದರು.

ಮಾಸ್ಕ್ ಒಂದೇ ಆಪದ್ಭಾಂದವ: ಕೋವಿಡ್‌ಗೆ ವ್ಯಾಕ್ಸಿನ್ ಸದ್ಯ ಬರುವ ಸೂಚನೆ ಇಲ್ಲದಿರುವುದರಿಂದ ಜನರು ಮಾರ್ಗಸೂಚಿಗಳನ್ನು ಇನ್ನಷ್ಟು ಕಾಲ ಪಾಲಿಸಲೇಬೇಕಾಗಿದೆ. ಸದ್ಯ ಮಾಸ್ಕ್ ಒಂದೇ ಕೋವಿಡ್‌ನ್ನು ತಡೆಯುವ ಏಕೈಕ ‘ಉಪಾಯ’. ಹೀಗಾಗಿ ಪ್ರತಿಯೊಬ್ಬರು ಮಾಸ್ಕ್‌ನ್ನು ಕಡ್ಡಾಯವಾಗಿ ಧರಿಸಲೇಬೇಕು. ಕಳೆದೆರಡು ತಿಂಗಳಿನಿಂದ ಜಿಲ್ಲೆಯಲ್ಲಿ ಜನರು ಕೋವಿಡ್ ಮಾರ್ಗಸೂಚಿ ಗಳನ್ನು ಉಲ್ಲಂಘಿಸುವುದನ್ನು ಸ್ಪಷ್ಟವಾಗಿ ನೋಡುತಿದ್ದೇವೆ. ಈ ಬಗ್ಗೆ ನನಗೆ ದೂರುಗಳೂ ಬರುತ್ತಿವೆ ಎಂದು ಜಿಲ್ಲಾಧಿಕಾರಿ ನುಡಿದರು.

ಆದರೆ ಮಾಸ್ಕ್ ಧರಿಸದೇ ಮಾರ್ಗಸೂಚಿ ಉಲ್ಲಂಘನೆಗಾಗಿ ವಿಧಿಸುತ್ತಿರುವ ದಂಡದ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದೆ. ಇದರರ್ಥ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬುದು. ಸರಕಾರ ಜಿಲ್ಲಾಧಿಕಾರಿಗೆ ನೀಡಿರುವ ಅಧಿಕಾರ ಚಲಾಯಿಸಿ ಮಾಸ್ಕ್ ಧರಿಸದ ಸಾರ್ವಜನಿಕರು ಹಾಗೂ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದ ಸರಕಾರಿ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಲೇ ಬೇಕಾಗುತ್ತದೆ ಎಂದು ಅವರು ಎಲ್ಲಾ ಅಧಿಕಾರಿಗಳಿಗೂ ಎಚ್ಚರಿಕೆ ನೀಡಿದರು.

‘ನೀವು ಮಾರ್ಗಸೂಚಿ ಉಲ್ಲಂಘಿಸುವ ಸಾರ್ವಜನಿಕರ ವಿರುದ್ಧ ಕ್ರಮ ಕೈಗೊಳ್ಳ ದಿದ್ದರೆ, ನಾನು ನಿಮ್ಮ ವಿರುದ್ಧ ಪ್ರಕರಣ ದಾಖಲಿಸಬೇಕಾಗುತ್ತದೆ. ಹೀಗಾಗಿ ಅಧಿಕಾರಿಗಳು ತಮ್ಮ ಅಧಿಕಾರವನ್ನು ಸರಿಯಾಗಿ ಚಲಾಯಿಸಿ ಮಾರ್ಗಸೂಚಿ ಉಲ್ಲಂಘನೆಯನ್ನು ನಿಲ್ಲಿಸಬೇಕು’ ಎಂದು ಜಗದೀಶ್ ಎಚ್ಚರಿಕೆ ನೀಡಿದರು.

ಗರಿಷ್ಠ 200 ಮಂದಿ: ಕಳೆದೆರಡು ತಿಂಗಳಿನಿಂದ ಜಿಲ್ಲೆಯಲ್ಲಿ ದೇವಸ್ಥಾನಗಳು, ಬೀಚ್‌ಗಳು ತೆರೆಯಲ್ಪಟ್ಟಿವೆ. ಸಾಕಷ್ಟು ಸಾಂಸ್ಕೃತಿಕ, ಮದುವೆ, ರಾಜಕೀಯ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಮಾರ್ಗಸೂಚಿಯಂತೆ ಯಾವುದೇ ಕಾರ್ಯಕ್ರಮಗಳಲ್ಲಿ 200ಕ್ಕಿಂತ ಹೆಚ್ಚು ಜನರು ಸೇರುವಂತೆಯೇ ಇಲ್ಲ. ಆದರೆ ಎಲ್ಲಾ ಕಡೆಗಳಲ್ಲೂ ಇದು ಉಲ್ಲಂಘನೆಯಾಗುತ್ತಿದೆ ಎಂದು ನನಗೆ ದೂರು, ಮಾಹಿತಿಗಳು ಬರುತ್ತಿವೆ.’ ಎಂದು ಅವರು ಹೇಳಿದರು.

ಕಳೆದ ಎರಡು ವಾರಗಳಿಂದ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಗಳು 10-15-20ರೊಳಗಿದ್ದರೆ, ಎರಡು ದಿನಗಳಿಂದ ಇವುಗಳ ಸಂಖ್ಯೆ ಹೆಚ್ಚುತ್ತಿವೆ. ಹೀಗಾಗಿ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಎಲ್ಲೂ ಮಾರ್ಗಸೂಚಿ ಉಲ್ಲಂಘನೆಯಾಗದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದರು.

ಕಂಬಳ, ಭೂತದ ಕೋಲಕ್ಕೂ ಅನುಮತಿ ಬೇಕು
ಮನೆಯೊಳಗೆ, ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಾರ್ಯಕ್ರಮಗಳ ಸಂಘಟನೆಗೆ ಸಂಬಂಧಿತ ಅಧಿಕಾರಿಯಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆದಿರಬೇಕು.

ಮಾರ್ಗಸೂಚಿಯಂತೆ ಮದುವೆ, ರಾಜಕೀಯ ಸಭೆ ಸಮಾರಂಭ ಸೇರಿದಂತೆ ಕಾರ್ಯಕ್ರಮವೊಂದರಲ್ಲಿ ಗರಿಷ್ಠ 200 ಮಂದಿ ಭಾಗವಹಿಸಬಹುದು. ಅದಕ್ಕಿಂತ ಹೆಚ್ಚು ಜನರನ್ನು ಸೇರಿಸುವಂತೆಯೇ ಇಲ್ಲ. ಇಂಥ ಕಾರ್ಯಕ್ರಮಗಳಲ್ಲಿ ಸುರಕ್ಷಿತ ಅಂತರ, ಸ್ಯಾನಟೈಸ್ ಬಳಕೆ ಕಡ್ಡಾಯ. ಉತ್ತರಾದಿ ಕ್ರಿಯೆಗಳಲ್ಲಿ 20ಜನರು ಮಾತ್ರ ಭಾಗವಹಿಸಬಹುದು. ಯಾವುದೇ ಸಭಾಂಗಣದಲ್ಲಿ ಶೇ.50ರಷ್ಟು ಮಾತ್ರ ಜನರನ್ನು ಭರ್ತಿ ಮಾಡಬಹುದು. ಕರಾವಳಿಯಲ್ಲಿ ಇನ್ನು ಕಂಬಳ, ಭೂತದ ಕೋಲ ನಡೆಯುವ ಕಾಲ. ಇವುಗಳಿಗೂ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಎಲ್ಲಾ ಕಡೆಗಳಲ್ಲೂ ಸರಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಅನುಸರಿಸಬೇಕು. ಉಲ್ಲಂಘಿಸಿದರೆ ಕಠಿಣ ಕ್ರಮ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ನೋಡೆಲ್ ಅಧಿಕಾರಿಗಳ ನೇಮಕ
ಪ್ರತಿ ತಾಲೂಕಿನಲ್ಲೂ ಪೂರ್ವಾನುಮತಿಯೊಂದಿಗೆ ನಡೆಯುವ ಎಲ್ಲಾ ಕಾರ್ಯಕ್ರಮಗಳ ಮೇಲ್ವಿಚಾರಣೆಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗುವುದು. ಅವರು ಇಂಥ ಕಾರ್ಯಕ್ರಮಗಳಿಗೆ ತೆರಳಿ ಮಾರ್ಗಸೂಚಿ ಪಾಲನೆಯಾಗುತ್ತಿರುವ ಬಗ್ಗೆ ಪರಿಶೀಲಿಸುವ ಅಧಿಕಾರ ಹೊಂದಿರುತ್ತಾರೆ ಎಂದು ಜಿ.ಜಗದೀಶ್ ನುಡಿದರು.

ಮಾರ್ಗಸೂಚಿಯ ಪಾಲನೆ ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಾವು ರಾಜಕೀಯ ಪಕ್ಷಗಳ ಕಾರ್ಯಕ್ರಮಗಳ ಆಯೋಜಕರು ಸೇರಿದಂತೆ ಎಲ್ಲರಿಗೂ ಮನವಿ ಮಾಡುವುದಾಗಿ ತಿಳಿಸಿದರು.

ಪ್ರಾಥಮಿಕ ಸಂಪರ್ಕಿತರ ಪರೀಕ್ಷೆ
ಈಗ ಕೋವಿಡ್‌ಗೆ ಪಾಸಿಟಿವ್ ಬರುವವರು ಸಾಕಷ್ಟು ಮಂದಿಯ ಸಂಪರ್ಕದಲ್ಲಿರುವುದರಿಂದ ಇನ್ನು ಪಾಸಿಟಿವ್ ಬರುವವರ ಪ್ರಾಥಮಿಕ ಸಂಪರ್ಕಿತರನ್ನೆಲ್ಲಾ ಗುರುತಿಸಿ ಅವರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ. ಇದಕ್ಕಾಗಿ ಅವರು ಭಾಗವಹಿಸುವ ಸಮಾರಂಭಗಳ ವಿಡಿಯೋ ಪರಿಶೀಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮನೆಯಿಂದ ಹೊರಗೆ ಬರುವಾಗ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಅದೇ ರೀತಿ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಅಂಗಡಿಗಳ ಮಾಲಕರು, ನೌಕರರು ಮಾಸ್ಕ್ ಧರಿಸುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ಇದು ನಗರಸಭಾ ಅಧಿಕಾರಿಗಳ ಹೊಣೆಯಾಗಿದ್ದು, ಅವರನ್ನೇ ಇದಕ್ಕೆ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಯಾರೋ ಒಬ್ಬರ ನಿರ್ಲಕ್ಷದಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಬಾರದು ಎಂಬುದು ಜಿಲ್ಲಾಡಳಿತದ ಕಾಳಜಿ ಎಂದು ಜಿ.ಜಗದೀಶ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News