ಮಸೀದಿ ವಿರುದ್ಧದ ವೆನ್ಜ್ ಅಬ್ದುಲ್ ಆರೋಪ ನಿರಾಧಾರ: ಬೈಲುಪೇಟೆ ಜುಮ್ಮಾ ಮಸೀದಿ ಜಮಾಅತ್ ಸಮಿತಿ ಸ್ಪಷ್ಟನೆ

Update: 2020-11-30 14:52 GMT

ಮಂಗಳೂರು, ನ.30: ಗುರುಪುರ ಬೈಲುಪೇಟೆ ಜಮಾಲಿಯ ಜುಮ್ಮಾ ಮಸೀದಿಯ ಆಡಳಿತದಲ್ಲಿ ಹಣಕಾಸು ಅವ್ಯವಹಾರ ನಡೆದಿದೆ ಎನ್ನುವುದು ಸೇರಿದಂತೆ ಹಲವು ಆರೋಪಗಳನ್ನು ಮಾಡಿರುವ ವೆನ್ಜ್ ಅಬ್ದುಲ್ ಅಝೀಝ್ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದು ಜಮಾಲಿಯ ಜುಮ್ಮಾ ಮಸೀದಿಯ ಜಮಾಅತ್ ಸಮಿತಿ ಸ್ಪಷ್ಟನೆ ನೀಡಿದೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಸೋಮವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಸೀದಿಯ ಜಮಾಅತೆ ಸದಸ್ಯ ಯಾಕೂಬ್ ಅಹ್ಮದ್ ಸಲಾಂ, ಕಳೆದ ಐದು ವರ್ಷಗಳಿಂದ ಜಮಾಅತ್‌ನ ಅಧ್ಯಕ್ಷರಾಗಿ ಬಿ.ಜಕ್ರಿ ಹಸನಬ್ಬ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಧ್ಯಕ್ಷರು ಹಲವು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಮಸೀದಿಯ ಆಡಳಿತ ಸಮಿತಿಯಲ್ಲಿ ಯಾವುದೇ ರೀತಿಯ ಹಣಕಾಸಿನ ಅವ್ಯವಹಾರ ನಡೆದಿಲ್ಲ ಎಂದು ಪುನರುಚ್ಚರಿಸಿದರು.

ಸರಕಾರದಿಂದ ಬಿಡುಗಡೆಯಾಗಿದ್ದ 1.27 ಕೋಟಿ ರೂ.ನ್ನು ತಾನು ಅಧ್ಯಕ್ಷನಾಗಿಲ್ಲವೆಂಬ ಕಾರಣಕ್ಕೆ ರಾಜಕೀಯ ಪ್ರಭಾವಿಗಳ ಸಹಾಯ ಪಡೆದು ಅನುದಾನ ತಿರಸ್ಕೃತಗೊಳಿಸುವಲ್ಲಿಯೂ ವೆನ್ಜ್ ಅಬ್ದುಲ್ ಯಶಸ್ವಿಯಾಗಿದ್ದ. ಮಸೀದಿಯ ವಿರುದ್ಧ ಯುವಕರ ಗುಂಪು ಕಟ್ಟಿಕೊಂಡು ನ್ಯಾಯಾಲಯದಲ್ಲಿ ಅಧ್ಯಕ್ಷರ ವಿರುದ್ಧ ಮೊಕದ್ದಮೆ ಹೂಡಿದ್ದ. ನ್ಯಾಯಾಲಯವು ಮಸೀದಿಯ ಪರವಾಗಿಯೇ ತೀರ್ಪು ನೀಡಿದೆ ಎಂದರು.

ಜಮಾಅತ್‌ನ ಹಾಲಿ ಅಧ್ಯಕ್ಷ ಬಿ.ಜಕ್ರಿ ಅವರು ಮಸೀದಿಗೆ ಕಟ್ಟಡ ಕಟ್ಟಿಸಿಕೊಡುವುದು ಅಥವಾ ಅವರ ಪುತ್ರ ನಿರ್ಮಿಸುವ ಹೇಳಿಕೆಗಳು ಮಸೀದಿಯ ಪುಸ್ತಕದಲ್ಲಿ ದಾಖಲಾಗಿಲ್ಲ. ವೆನ್ಜ್ ಅಬ್ದುಲ್ ಅಝೀಜ್ ಹೇಳುವುದೆಲ್ಲ ಕಟ್ಟುಕಥೆಯಾಗಿದೆ ಎಂದು ಹೇಳಿದರು.

ಮಸೀದಿಯು ಕೇರಳ ಮತ ವಿದ್ಯಾಭ್ಯಾಸ ಬೋರ್ಡ್‌ನ ಅಧೀನಲ್ಲಿದೆ. ಮಸೀದಿಯ ಹೆಸರಲ್ಲಿ ಎಸ್‌ಕೆಐಎಂವಿಬಿ ಹೊರತು ಯಾವುದೇ ಸಂಘಟನೆಯ ಪುಸ್ತಕಗಳು ಮಸೀದಿಯಲ್ಲಿ ಇರುವುದಿಲ್ಲ. ಮಸೀದಿಯ ವಾರ್ಷಿಕ ಮಹಾಸಭೆಯು ಪ್ರತಿವರ್ಷ ನಡೆಸುತ್ತಿದೆ. ಜಮಾಅತ್‌ನ ಯಾವುದೇ ಮೊಕದ್ದಮೆಗಳು ಎಸ್ಸೆಸ್ಸೆಫ್ ಮತ್ತು ಎಸ್ಕೆಎಸ್ಸೆಸ್ಸೆಫ್‌ಗೆ ಸಂಬಂಧಪಟ್ಟಿಲ್ಲ. ಮಸೀದಿಯ ಅಧ್ಯಕ್ಷ ಸ್ಥಾನ ಸಿಗದಿರುವುದು ಹಾಗೂ ಎಸ್ಸೆಸ್ಸೆಫ್ ಸಂಘಟನೆಯನ್ನು ಮಸೀದಿಯಲ್ಲಿ ಅಳವಡಿಸುವಲ್ಲಿ ವಿಫಲವಾಗಿದ್ದಕ್ಕೆ ಈ ರೀತಿ ಅಪಪ್ರಚಾರ ಮಾಡಲಾಗುತ್ತಿದೆ. ವೆನ್ಜ್ ಅಬ್ದುಲ್ ಹೇಳುವಂತಹ ಮಸೀದಿಯ ಹಣಕಾಸಿನ ಅವ್ಯವಹಾರವು ಸತ್ಯಕ್ಕೆ ದೂರ ಎಂದು ಅವರು ಸ್ಪಷ್ಟಪಡಿಸಿದರು.

ಅಬ್ದುಲ್ ಅಝೀಜ್ ಹಲ್ಲೆ ಕೃತ್ಯದಲ್ಲಿ ಮಸೀದಿಯ ಯಾರೇ ಸದಸ್ಯರು ಭಾಗಿಯಾಗಿರುವುದು ದಾಖಲೆ ಸಮೇತ ಸಾಬೀತಾದರೆ ಅಂಥವರಿಗೆ ಬೆಂಬಲ ನೀಡಲ್ಲ. ಈ ಹಲ್ಲೆ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ಸಹಕಾರ ನೀಡಲು ಸಿದ್ಧರಿದ್ದೇವೆ. ಗಾಯಾಳುಗಳು ಶೀಘ್ರ ಗುಣಮುಖರಾಗುವಂತಾಗಲಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನೈಜ ಆರೋಪಿಗಳನ್ನು ಬಂಧಿಸಲಿ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುಪುರ ಬೈಲುಪೇಟೆ ಜಮಾಲಿಯ ಜುಮ್ಮಾ ಮಸೀದಿಯ ಜಮಾಅತ್‌ನ ಉಪಾಧ್ಯಕ್ಷ ಎ.ಶೇಕಬ್ಬ, ಸದಸ್ಯರಾದ ಮುಹಮ್ಮದ್ ಮುಸ್ತಫಾ, ಅಬ್ದುಲ್ ಹಮೀದ್, ಕೆ.ಉಸ್ಮಾನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News