ವಿದ್ಯಾರ್ಥಿ ವೇತನ ವಿಳಂಬ ಖಂಡಿಸಿ ಸಿಎಫ್‌ಐ ಪ್ರತಿಭಟನೆ

Update: 2020-11-30 14:26 GMT

ಮಂಗಳೂರು,ನ.30: ಅಲ್ಪಸಂಖ್ಯಾತ ಇಲಾಖೆಯಲ್ಲಿ ಪ್ರತೀ ವರ್ಷ ಪೋಸ್ಟ್ ಮೆಟ್ರಿಕ್, ಪ್ರಿ ಮೆಟ್ರಿಕ್, ಅರಿವು ಸಾಲ ಯೋಜನೆಯಡಿ ನೀಡಲಾಗುವ ಸ್ಕಾಲರ್ ಶಿಪ್ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಸಮರ್ಪಕವಾಗಿ ಜಮೆಯಾಗುತ್ತಿಲ್ಲ ಎಂದು ಆರೋಪಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಸೋಮವಾರ ನಗರದ ಪಾಂಡೇಶ್ವರದಲ್ಲಿರುವ ಅಲ್ಪಸಂಖ್ಯಾತ ಇಲಾಖೆಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಎಬಿ ಶೆಟ್ಟಿ ವೃತ್ತದಿಂದ ರ‍್ಯಾಲಿ ನಡೆಸಿದ ವಿದ್ಯಾರ್ಥಿಗಳು ಸರಕಾರದ ಧೋರಣೆಯ ವಿರುದ್ಧ ಘೋಷಣೆ ಕೂಗಿದರಲ್ಲದೆ, ಈ ಯೋಜನೆಯಡಿ ಸ್ಕಾಲರ್‌ಶಿಪ್ ಸರಿಯಾಗಿ ವಿದ್ಯಾರ್ಥಿಗಳ ಕೈಗೆ ಸಿಗುತ್ತಿಲ್ಲ. ಶೇ.50 ರಷ್ಟು ಅರ್ಜಿಗಳಲ್ಲಿ ಇನ್ನೂ ಕೂಡ ಹಣ ವರ್ಗಾವಣೆಯಾಗಿಲ್ಲ. ಪ್ರತೀ ವರ್ಷ ಇದು ಪುನರಾವರ್ತನೆಯಾಗುತ್ತಲೇ ಇದೆ. ಕಚೇರಿಗೆ ಹೋಗಿ ವಿಚಾರಿಸಿದರೆ ಬೇಜವಾಬ್ದಾರಿಯುತ ಉತ್ತರ ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ಕೊರೋನದಿಂದಾಗಿ ಪೋಷಕರು ಮತ್ತು ವಿದ್ಯಾರ್ಥಿಗಳು ಸಮಸ್ಯೆಯಲ್ಲಿದ್ದಾರೆ. ಶಾಲಾಕಾಲೇಜುಗಳು ಆನ್‌ಲೈನ್ ತರಗತಿಯ ನೆಪದಲ್ಲಿ ಶುಲ್ಕ ಕೇಳುತ್ತಿವೆ. ಆದರೆ ಸ್ಕಾಲರ್‌ಶಿಪ್ ಮಂಜೂರಾಗದ ಕಾರಣ ಕಂಗಾಲಾಗುವಂತಾಗಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಮತ್ತು ಎಂಫಿಲ್ ವ್ಯಾಸಂಗ ಮಾಡುತ್ತಿರುವವರಿಗೆ ಮಾಸಿಕ 25,000 ರೂ. ಫೆಲೋಶಿಪ್ ದೊರೆಯುತ್ತಿತ್ತು. ವಾರ್ಷಿಕವಾಗಿ 10,000 ರೂ. ನಿರ್ವಹಣಾ ವೆಚ್ಚಕ್ಕಾಗಿ ದೊರೆಯುತ್ತಿತ್ತು. ಇವೆಲ್ಲವನ್ನೂ ಏಕಾಏಕಿ ಕಡಿತಗೊಳಿಸಲಾಗಿದೆ. ಮಾಸಿಕ 25,000 ರೂ. ಫೆಲೋಶಿಪ್ ಅನ್ನು 10,000 ರೂ.ಗೆ ಇಳಿಸಿದ್ದಾರೆ ಎಂದು ಹೇಳಿದರು.

ಸ್ಕಾಲರ್‌ಶಿಪ್ ವಿತರಣೆಯ ಸಂದರ್ಭ ಪ್ರತೀ ಬಾರಿ ತಾಂತ್ರಿಕ ತೊಂದರೆಗಳು ಎದುರಾಗುತ್ತಿದೆ. ಈ ಪ್ರಕ್ರಿಯೆಯನ್ನು ಸರಳೀಕರಿಸಬೇಕು. ಬಿಡುಗಡೆಗೊಳ್ಳಲು ಬಾಕಿಯಿರುವ ಸ್ಕಾಲರ್‌ಶಿಪ್‌ನ್ನು ಬಿಡುಗಡೆಗೊಳಿಸಬೇಕು. ಎಂಫಿಲ್ಗೆ ಇರುವ ಫೆಲೋಶಿಪ್ ಕಡಿತಗೊಳಿಸದೆ ಯಥಾಸ್ಥಿತಿ ಕಾಪಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

 ಸಿಎಫ್‌ಐ ರಾಜ್ಯ ಸಮಿತಿ ಸದಸ್ಯ ಇಮ್ರಾನ್ ಪಿಜೆ ಮಾತನಾಡಿ ಸ್ಕಾಲರ್‌ಶಿಪ್ ಹಣ ನೀಡಲು ಸರಕಾರದ ಖಜಾನೆಯಲ್ಲಿ ದುಡ್ಡಿಲ್ಲ. ಆದರೆ ಮರಾಠ ಪ್ರಾಧಿಕಾರಕ್ಕೆ, ಲಿಂಗಾಯತ ನಿಗಮಕ್ಕೆ ಕೊಡಲು ಹಣವಿದೆ. ಈಗಾಗಲೇ ಶಾಲಾ ಕಾಲೇಜುಗಳು ಆನ್‌ಲೈನ್ ಮೂಲಕ ಆರಂಭವಾಗಿದ್ದು, ಶಿಕ್ಷಣ ಸಂಸ್ಥೆಗಳು ದಾಖಲಾತಿ ಶುಲ್ಕವನ್ನು ಒಂದೇ ಕಂತಿನಲ್ಲಿ ವಸೂಲಿ ಮಾಡುತ್ತಿದ್ದಾರೆ. ಹಾಗಾಗಿ ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಿಎಫ್‌ಐ ರಾಜ್ಯ ಉಪಾಧ್ಯಕ್ಷೆ ಮುಫೀದಾ ರಹ್ಮಾನ್ ಮಾತನಾಡಿ ಸರಕಾರ ವಿದ್ಯಾರ್ಥಿ ವೇತನ ಶೀಘ್ರ ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲಾದ್ಯಂತ ವಿದ್ಯಾರ್ಥಿಗಳನ್ನು ಸಂಘಟಿಸಿ ಹೋರಾಟ ಮಾಡಲಾಗವುದು ಎಂದು ಎಚ್ಚರಿಸಿದರು.

ಈ ಸಂದರ್ಭ ಸಿಎಫ್‌ಐ ಜಿಲ್ಲಾಧ್ಯಕ್ಷ ಹಸನ್ ಸಿರಾಜ್, ಕಾರ್ಯದರ್ಶಿ ಮುನೀರ್ ಬಜಾಲ್, ಜಿಲ್ಲಾ ಮುಖಂಡ ತಾಜುದ್ದೀನ್, ಮಂಗಳೂರು ವಲಯಾಧ್ಯಕ್ಷೆ ಮುರ್ಶಿದಾ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News