ಉಡುಪಿ: ನ.30ರಿಂದ ಸಕಾಲ ಸಪ್ತಾಹ

Update: 2020-11-30 15:01 GMT

ಉಡುಪಿ, ನ.30: ಸಾರ್ವಜನಿಕರಲ್ಲಿ ಸಕಾಲ ಯೋಜನೆಯ ಕುರಿತು ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಹಾಗೂ ಸಕಾಲದಡಿ ಸ್ವೀಕರಿಸಿ ಬಾಕಿ ಉಳಿದ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲು ಸಕಾಲ ಸಪ್ತಾಹವನ್ನು ಇಂದಿನಿಂದ ಆಚರಿಸಲಾಗುತ್ತಿದೆ.

ನ.30ರಿಂದ ಡಿ.5ರವರೆಗೆ ನಗರಾಭಿವೃದ್ಧಿ, ಕಂದಾಯ, ಸಾರಿಗೆ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಗಳಲ್ಲಿ ಹಾಗೂ ಡಿಸೆಂಬರ್ 7ರಿಂದ 11ರವರೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಪ್ತಾಹವನ್ನು ಆಚರಿಸಲಾಗುವುದು.

ಸಪ್ತಾಹದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳು: ಹೊಸದಾಗಿ ಸ್ವೀಕರಿಸಿರುವ ಅರ್ಜಿಗಳನ್ನು ಸಕಾಲದಡಿ ಸ್ವೀಕರಿಸಿ ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು. ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಸಕಾಲ ಮಿಷನ್ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು, ಸಕಾಲ ತಂಡದಿಂದ ಕಚೇರಿಗಳಿಗೆ ಭೇಟಿ ಹಾಗೂ ತಪಾಸಣೆ, ಸಾರ್ವಜನಿಕರ ಅಭಿಪ್ರಾಯ ಕ್ರೋಡೀಕರಿಸಲು ಹೆಲ್ಪ್‌ಡೆಸ್ಕ್ ಸಹಾಯ ದೊಂದಿಗೆ ಪ್ರಶ್ನಾವಳಿಯನ್ನು ಸಾರ್ವಜನಿಕರಿಂದ ಭರ್ತಿ ಮಾಡುವುದು ಸೇರಿದಂತೆ ಸಕಾಲದ ಕುರಿತು ಪ್ರಚಾರ ಕಾರ್ಯಕ್ರಮಗಳನ್ನು ಸಪ್ತಾಹದಲ್ಲಿ ಹಮ್ಮಿಕೊಳ್ಳಲಾಗುವುದು.

ಸರಕಾರದ ಸೇವೆಗಳನ್ನು ವಿಳಂಬವಿಲ್ಲದೇ ಕಾಲಮಿತಿಯೊಳಗೆ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಕರ್ನಾಟಕ ನಾಗರಿಕ ಸೇವೆಗಳ ಖಾತರಿ ಅಧಿನಿಯಮ ಜಾರಿಗೆ ತರಲಾಗಿದ್ದು, ಪ್ರಸ್ತುತ ಸಕಾಲ ಯೋಜನೆಯಡಿ ಒಟ್ಟು 98 ಇಲಾಖೆ/ ಸಂಸ್ಥೆಗಳ 1020ಕ್ಕೂ ಹೆಚ್ಚಿನ ನಾಗರಿಕ ಕೇಂದ್ರಿತ ಸೇವೆಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News