ಪ್ರಚೋದನಕಾರಿ ಗೋಡೆ ಬರಹ ಪ್ರಕರಣ: ಸಿಸಿಟಿವಿ ಫೂಟೇಜ್ ಅಸ್ಪಷ್ಟ, ತನಿಖೆ ವಿಳಂಬ ?

Update: 2020-11-30 15:11 GMT

ಮಂಗಳೂರು, ನ.30: ನಗರದ ಎರಡು ಕಡೆಗಳಲ್ಲಿ ಪ್ರಚೋದನಕಾರಿ ಹೇಳಿಕೆಯ ಗೋಡೆಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಎರಡೂ ಪ್ರಕರಣಗಳಲ್ಲಿ ಸಿಸಿಟಿವಿ ಫೂಟೇಜ್‌ಗಳು ಅಸ್ಪಷ್ಟವಾಗಿದ್ದು, ತನಿಖೆ ವಿಳಂಬವಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪ್ರಚೋದನಕಾರಿ ಗೋಡೆ ಬರಹ ಕಾಣಿಸಿಕೊಂಡಿದ್ದರಿಂದ ಸಾರ್ವಜನಿಕ ವಲಯದಲ್ಲಿ ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿತ್ತು. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಏತನ್ಮಧ್ಯೆ, ಆರೋಪಿಗಳ ಶೀಘ್ರ ಪತ್ತೆಗೆ ಹಲವು ಸಂಘಟನೆಗಳು, ಪಕ್ಷಗಳು ಕೂಡ ಆಗ್ರಹಿಸಿವೆ. ಸಾರ್ವಜನಿಕ ವಲಯದಲ್ಲೂ ಇದೇ ಒತ್ತಾಯ ಕೇಳಿಬರುತ್ತಿದೆ.

ಗೋಡೆ ಬರಹ ಪ್ರಕರಣಗಳಲ್ಲಿ ಪ್ರತ್ಯಕ್ಷ ಸಾಕ್ಷಿಗಳು ಇಲ್ಲದಿರುವುದು, ಸಿಸಿಟಿವಿ ಫೂಟೇಜ್ ಅಸ್ಪಷ್ಟವಾಗಿರುವುದರಿಂದ ತನಿಖೆ ವಿಳಂಬವಾಗುತ್ತಿದೆ. ಘಟನೆಯ ಸಂಬಂಧಪಟ್ಟಂತೆ ಮಂಗಳೂರಿನಾದ್ಯಂತ ಹಲವು ಸಿಸಿಟಿವಿ ಫೂಟೇಜ್‌ಗಳನ್ನು ಪಡೆದುಕೊಳ್ಳಲಾಗಿದೆ. ಇದರೊಂದಿಗೆ ತಾಂತ್ರಿಕ ಪರಿಶೀಲನೆ ಕಾರ್ಯವೂ ನಡೆಯುತ್ತಿದೆ. ಶೀಘ್ರದಲ್ಲೇ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಕ್ತ ಸಿಸಿಬಿ ತಂಡ, ಉಪವಿಭಾಗ, ಕದ್ರಿ ಮತ್ತು ಬಂದರು ಠಾಣೆ ಪೊಲೀಸ್ ತಂಡಗಳು ತನಿಖೆ ನಡೆಸುತ್ತಿವೆ.

ಗೋಡೆ ಬರಹವನ್ನು ಸ್ಪಷ್ಟ ಇಂಗ್ಲಿಷ್‌ನಲ್ಲಿ ತಪ್ಪಿಲ್ಲದೆ ಬರೆದಿರುವುದರಿಂದ ಇದನ್ನು ಭಾಷೆ ಚೆನ್ನಾಗಿ ಗೊತ್ತಿರುವವರೇ ಬರೆದಿರುವುದಾಗಿ ವಿಶ್ಲೇಷಿಸಲಾಗುತ್ತಿದೆ. ಸುಶಿಕ್ಷಿತ ಯುವಕರ ತಂಡ ಈ ಕೃತ್ಯ ಎಸಗಿರಬಹುದು ಎನ್ನಲಾಗಿದೆ. ಜನರ ಕಣ್ಣುತಪ್ಪಿಸಿ ಬರೆಯಬೇಕಾಗಿರುವುದರಿಂದ ಹಲವು ಕಿಡಿಗೇಡಿಗಳು ಇದರ ಹಿಂದೆ ಇರುವ ಬಗ್ಗೆಯೂ ಪೊಲೀಸರು ಅಂದಾಜಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News