ಉಳ್ಳಾಲ: ರಸ್ತೆ ದಾಟುತ್ತಿದ್ದ ಮಗುವಿನ ಮೇಲೆ ಹರಿದ ಟ್ಯಾಂಕರ್

Update: 2020-11-30 15:45 GMT

ಮಂಗಳೂರು, ನ.30: ಉಳ್ಳಾಲಬೈಲ್‌ನಲ್ಲಿ ತಾಯಿ ಮತ್ತು ಮಕ್ಕಳು ರಸ್ತೆ ದಾಟುತ್ತಿದ್ದ ವೇಳೆ ಮಗುವಿನ ಮೇಲೆ ಟ್ಯಾಂಕರ್ ಹರಿದ ಘಟನೆ ಸೋಮವಾರ ಸಂಜೆ ನಡೆದಿದೆ.

ಉತ್ತರ ಪ್ರದೇಶ ಮೂಲದ ಹಾಗೂ ಉಳ್ಳಾಲಬೈಲ್ ಪ್ರದೇಶದಲ್ಲಿ ವಾಸವಾಗಿರುವ ಕುಟುಂಬದ ನಾಲ್ಕು ವರ್ಷದ ಕೃಷ್ಣ ಎಂಬ ಮಗು ಗಂಭೀರ ಸ್ಥಿತಿಯಲ್ಲಿದೆ ಎಂದು ತಿಳಿದುಬಂದಿದೆ.

ಉಳ್ಳಾಲಬೈಲ್‌ನಲ್ಲಿ ಸಂಜೆ 6:30ರ ಸುಮಾರಿಗೆ ತಾಯಿ ಸಹಿತ ಮಕ್ಕಳು ರಸ್ತೆ ದಾಟುತ್ತಿದ್ದರು. ಈ ವೇಳೆ ತೊಕ್ಕೊಟ್ಟಿನಿಂದ ಉಳ್ಳಾಲ ಕಡೆಗೆ ತೆರಳಿದ್ದ ನೀರಿನ ಟ್ಯಾಂಕರ್ ಢಿಕ್ಕಿ ಹೊಡೆದಿದ್ದು, ಬಳಿಕ ಮಗುವಿನ ಮೇಲೆ ಟ್ಯಾಂಕರ್ ಹರಿದಿದೆ.

ಉತ್ತರ ಪ್ರದೇಶ ಮೂಲದ ದಂಪತಿಯ ಐವರು ಮಕ್ಕಳಲ್ಲಿ ಕೊನೆಯ ಕಾರ್ತಿಕ್ ಮತ್ತು ಕೃಷ್ಣ ಎಂಬ ಮಕ್ಕಳು ಅವಳಿ-ಜವಳಿ. ಗಾಯಾಳು ಮಗುವಿನ ಎರಡೂ ಕಾಲುಗಳು ಜಖಂಗೊಂಡಿವೆ. ಗಂಭೀರ ಸ್ಥಿತಿಯಲ್ಲಿರುವ ಮಗುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಮಂಗಳೂರು ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News