ಮಂಗಳೂರು: ಮನೆಗೆ ಅಕ್ರಮ ಪ್ರವೇಶಿಸಿ, ಪತ್ರಿಕೆಯ ಹೆಸರಲ್ಲಿ ಮಹಿಳೆಗೆ ಹಣಕ್ಕಾಗಿ ಬ್ಲ್ಯಾಕ್‌ಮೇಲ್

Update: 2020-11-30 16:11 GMT

ಮಂಗಳೂರು, ನ.30: ಬಜ್ಪೆ ಸಮೀಪದ ಮರವೂರಿನ ಮಹಿಳೆಯೊಬ್ಬರ ಮನೆಗೆ ಅಕ್ರಮ ಪ್ರವೇಶಿಸಿ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಪತ್ರಿಕೆಯೊಂದರ ಹೆಸರಲ್ಲಿ ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡಿರುವ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ.26ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಸುಭಾಷ್ ಶೆಟ್ಟಿ, ಮನೋಜ್ ಉಳ್ಳಾಲ್ ಮತ್ತು ನಿತಿನ್ ಎಂಬವರು ಮರವೂರಿನ ಮನೆಗೆ ಕಾರೊಂದರಲ್ಲಿ ತೆರಳಿದ್ದಾರೆ. ಅಲ್ಲಿ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಬಳಿಕ ಮೊಬೈಲ್‌ನಲ್ಲಿ ಫೋಟೊ ತೆಗೆದು, ‘ನಾವು ಮೀಡಿಯಾದವರು. ನಿಮ್ಮಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ. ಈ ಬಗ್ಗೆ ನಾವು ಪತ್ರಿಕೆಯಲ್ಲಿ ಮತ್ತು ಸ್ಟೇಟ್ ಚಾನೆಲ್‌ನಲ್ಲಿ ಹಾಕುವುದಾಗಿ ಬೆದರಿಸಿದ್ದಾರೆ. ಆ ಬಳಿಕ ಒಂದು ಲಕ್ಷ ರೂ. ಕೊಟ್ಟರೆ ಸುದ್ದಿ ಹಾಕುವುದಿಲ್ಲ’ ಎಂದು ಹೇಳಿ ಹಣದ ಬೇಡಿಕೆ ಮುಂದಿಟ್ಟರು ಎಂದು ಸಂತ್ರಸ್ತರು ದೂರಿನಲ್ಲಿ ತಿಳಿಸಿದ್ದಾರೆ.

ಕೊನೆಗೆ, 15 ಸಾವಿರ ರೂ.ನ್ನು ಮನೆಯವರು ಕೊಟ್ಟಿದ್ದಾರೆ. ಉಳಿದ ಹಣವನ್ನು ಆಮೇಲೆ ಕೊಡುವುದಾಗಿ ಹೇಳಿದ್ದಾರೆ. ಆದರೆ, ಮರುದಿನ ಮನೋಜ್ ಮತ್ತು ನಿತಿನ್, ಮನೆಯವರಿಗೆ ಫೋನ್ ಮಾಡಿ ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದರು ಎಂದು ಸಂತ್ರಸ್ತರು ದೂರಿನಲ್ಲಿ ವಿವರಿಸಿದ್ದಾರೆ.

ಈ ಕುರಿತು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News