ಮಂಗಳೂರು: ಪುರಭವನದಲ್ಲಿ ಡಿ.1ರಂದು ಪಿಎಂ ಸ್ವನಿಧಿ ಸಾಲ ಉತ್ಸವ

Update: 2020-11-30 17:28 GMT

ಮಂಗಳೂರು, ನ.30: ಪ್ರಧಾನ ಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿಯು ದ.ಕ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಬೃಹತ್ ಪಿಎಂ ಸ್ವನಿಧಿ ಸಾಲ-ಉತ್ಸವ ಹಾಗೂ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರವನ್ನು ಡಿ.1ರಂದು ಬೆಳಗ್ಗೆ 11 ಗಂಟೆಗೆ ನಗರದ ಪುರಭವನದಲ್ಲಿ ಆಯೋಜಿಸಲಾಗಿದೆ.

ಸಂಸದ ನಳಿನ್ ಕುಮಾರ್ ಕಟೀಲ್ ಮುಂದಾಳತ್ವದಲ್ಲಿ ಹಾಗೂ ಶಾಸಕರ ಸಹಕಾರದೊಂದಿಗೆ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮಾವೇಶ ಉದ್ಘಾಟಿಸಲಿದ್ದು, ಉತ್ಸವದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸ್ಥಳದಲ್ಲಿಯೇ ಸಾಲ ಮಂಜೂರು ಮಾಡುವುದು, ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಬೀದಿಬದಿ ವ್ಯಾಪಾರಿಗಳಿಗೆ ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಮೀನುಗಾರಿಕಾ ಮತ್ತು ಹೈನುಗಾರಿಕೆಯ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸಾಲ ಮಂಜೂರಾತಿ ಪತ್ರಗಳನ್ನು ವಿತರಿಸಲಾಗುತ್ತದೆ.

ಸಾಲ ಮಂಜೂರಾತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದು, ಕೇಂದ್ರ ಸರಕಾರದ ವಿವಿಧ ಜನಪರ ಯೋಜನೆಗಳಾದ ಮುದ್ರ, ಪಿಎಂಇಜಿಪಿ, ಪಿಎಂಎವೈಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳು ಏಕಕಾಲದಲ್ಲಿ ನಡೆಯಲಿದೆ.

ಜಿಲ್ಲೆಯಾದ್ಯಂತ ಕಾರ್ಯಾಚರಿಸುತ್ತಿರುವ ವಿವಿಧ ಬ್ಯಾಂಕ್‌ಗಳು ತಮ್ಮ ಕೌಂಟರ್‌ಗಳನ್ನು ಅಳವಡಿಸಲಿದ್ದು, ಸ್ಥಳದಲ್ಲಿಯೇ ಸಾಲ ಮಂಜೂರಾತಿಗೆ ಕ್ರಮ ಕೈಗೊಳ್ಳಲಿವೆ. ಬೀದಿಬದಿ ವ್ಯಾಪಾರಿಗಳು ಡಿಜಿಟಲ್ ಪಾವತಿಗಾಗಿ ‘ಕ್ಯೂಆರ್’ ಕೋಡ್ ಸೌಲಭ್ಯವನ್ನು ಮೊಬೈಲ್ ಫೋನ್‌ಗಳಲ್ಲಿ ಅಳವಡಿಸಿಕೊಳ್ಳಲು ಫೋನ್ ಪೇ ಹಾಗೂ ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ಪೇಮೆಂಟ್ ಆಗ್ರಿಗೇಟರ್ಸ್‌ ತಮ್ಮ ಸೇವೆಯನ್ನು ಒದಗಿಸಲಿದ್ದಾರೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News