ಡಿ.7ರಂದು ಬಿಲ್ಲವ ಬ್ರಿಗೇಡ್ ನೇತೃತ್ವದಲ್ಲಿ ಕುದ್ರೋಳಿಯಿಂದ ಬಜ್ಪೆಗೆ ಬೈಕ್ ರ‍್ಯಾಲಿ

Update: 2020-12-01 11:05 GMT

ಮಂಗಳೂರು, ಡಿ.1: ಮಂಗಳೂರು ವಿಮಾನ ನಿಲ್ದಾಣಕ್ಕೆ ಕಾರಣಿಕ ಪುರುಷರಾದ ಕೋಟಿ ಚೆನ್ನಯ ನಾಮಕರಣಗೊಳಿಸಲು ಆಗ್ರಹಿಸಿ ಬಿಲ್ಲವ ಬ್ರಿಗೇಡ್ ನೇತೃತ್ವದಲ್ಲಿ ಕೋಟಿ-ಚೆನ್ನಯ ಸಂಚಲನ ಸಮಿತಿಯ ಸಹಯೋಗದೊಂದಿಗೆ ವಿವಿಧ ಸಂಘಟನೆಗಳ ಸಹಕಾರದಲ್ಲಿ ಡಿ. 7ರಂದು ಬೈಕ್ ರ‍್ಯಾಲಿ ಆಯೋಜಿಸಲಾಗಿದೆ. 

ಈ ಬಗ್ಗೆ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಚಲನ ಸಮಿತಿಯ ಪ್ರಧಾನ ಸಂಚಾಲಕ ಸತ್ಯಜಿತ್ ಸುರತ್ಕಲ್, ಅಂದು ಬೆಳಗ್ಗೆ 10 ಗಂಟೆಗೆ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಿಂದ ಹೊರಡುವ ಬೈಕ್ ರ‍್ಯಾಲಿ ಬಜ್ಪೆ ಕೆಂಜಾರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಸಾಗಲಿದೆ ಎಂದು ಬೈಕ್ ರ‍್ಯಾಲಿಯಲ್ಲಿ ಕನಿಷ್ಠ 500 ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಭಾಗವಹಿಸವವರು ಮಾಸ್ಕ್ ಧರಿಸುವುದು ಹಾಗೂ ಹೆಲ್ಮೆಟ್ ಹಾಕುವುದು ಕಡ್ಡಾಯವಾಗಿದೆ ಎಂದು ಅವರು ಹೇಳಿದರು.

ಗ್ರಾಮ ಪಂಚಾಯತ್‌ನಲ್ಲಿ ಆದ ನಿರ್ಣಯ 2019ರ ಜನವರಿ 30ರಂದು ನಡೆದ ದ.ಕ. ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯ ಹೆಸರಿಡಲು ಸರ್ವಾನುಮತದಿಂದ ಅಂಗೀಕರವಾಗಿ ನಿರ್ಣಯವಾಗಿ ರಾಜ್ಯ ಸರಕಾರಕ್ಕ ಸಲ್ಲಿಸಲಾಗಿದೆ. ಆದರೆ, ರಾಜ್ಯ ಸರಕಾರದಿಂದ ಅದು ವಾಪಸಾಗಿದೆ. ರಾಜ್ಯ ಸರಕಾರ ಈ ನಿರ್ಣಯವನ್ನು ಅಂಗೀಕರಿಸಿ ಸೂಕ್ತ ಕ್ರಮಕ್ಕಾಗಿ ಕೇಂದ್ರ ಸರಕಾರಕ್ಕೆ ಕಳುಹಿಸಬೇಕು ಎಂದವರು ಒತ್ತಾಯಿಸಿದರು.

ಈ ನಾಮಕರಣದ ಕುರಿತಂತೆ ಜಾತಿಯ ಹೋರಾಟವೆಂಬ ಅಪಸ್ವರವೂ ಕೇಳಿಬಂದಿದ್ದು, ಕೋಟಿ-ಚೆನ್ನಯ ಯಾವುದೇ ಒಂದು ಜಾತಿ, ಸಮುದಾಯಕ್ಕೆ ಸೀಮಿತರಾದವರಲ್ಲ. ಎಲ್ಲ ಜಾತಿ, ಸಮಾಜದ ಜನ ಅವರನ್ನು ಒಪ್ಪುತ್ತಾರೆ, ನಂಬುತ್ತಾರೆ. ಹಾಗಾಗಿ ವಿವಿಧ ಸಮುದಾಯಗಳ ಸಂಘಟನೆಗಳ ಸಹಕಾರದಲ್ಲಿ ಈಗಾಗಲೇ ಕೋಟಿ-ಚೆನ್ನಯ ಸಂಚಲನ ಸಮಿತಿ ರಚಿಸಲಾಗಿದ್ದು, ಈಗಾಗಲೇ ಇತರ ಹೆಸರುಗಳು ಕೂಡಾ ಕೇಳಿ ಬಂದಿರುವುದರಿಂದ ಆ ಸಂಸ್ಥೆ, ಸಂಘಟನೆಗಳವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಚಲನ ಸಮಿತಿಯ ಉಪಾಧ್ಯಕ್ಷ ಸೂರಜ್ ಕಲ್ಯ, ಬಿಲ್ಲವ ಬ್ರಿಗೇಡ್‌ನ ಅಧ್ಯಕ್ಷ ಜೀವನ್ ಪೂಜಾರಿ, ಸ್ಥಾಪಕ ಅಧ್ಯಕ್ಷ ಅವಿನಾಶ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಸನಿಲ್, ಸಂಘಟನಾ ಕಾರ್ಯದರ್ಶಿ ಅಶ್ವಥ್ ಉಪ್ಪಳ ಉಪಸ್ಥಿತರಿದ್ದರು.


ಅದಾನಿಗೆ ನಿರ್ವಹಣೆಗೆ ನೀಡಿದ್ದು ಮಾತ್ರ!
ನಮ್ಮ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗಿ ಸಂಸ್ಥೆಗೆ ಮಾರಾಟ ಮಾಡಿಲ್ಲ. ಹಾಗಾಗಿ ಹೆಸರು ಇಡುವ ಬಗ್ಗೆ ಅದಾನಿ ಸಂಸ್ಥೆ ಮಧ್ಯ ಪ್ರವೇಶಿಸುವ ಪ್ರಶ್ನೆಯೇ ಇಲ್ಲ. ಅದಾನಿಗೆ ವಿಮಾನ ನಿಲ್ದಾಣವನ್ನು ನಿರ್ವಹಣೆಗಾಗಿ ಮಾತ್ರವೇ ನೀಡಿದ್ದು, ಹಾಗಾಗಿ ಅದಾನಿ ಏರ್‌ಪೋರ್ಟ್ಸ್ ಎಂಬ ಹೆಸರಿಡಲಾಗಿದೆ ಎಂದಾಗಿದ್ದರೆ ಅದನ್ನು ತೆಗೆಸುವ ಜವಾಬ್ದಾರಿ ಸರಕಾರದ್ದು. ಹಲವಾರು ವರ್ಷಗಳಿಂದ ನಮ್ಮ ಬೇಡಿಕೆಯಂತೆ ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯ ಹೆಸರಿಡಬೇಕೆಂಬ ಬಗ್ಗೆ ನಮ್ಮ ಹೋರಾಟ ಎಂದು ಸತ್ಯಜಿತ್ ಸುರತ್ಕಲ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News