ಸಾಲದ ಅರ್ಜಿಗಳನ್ನು ಸೂಕ್ತ ಕಾರಣಗಳಿಲ್ಲದೆ ತಿರಸ್ಕರಿಸಬೇಡಿ: ಬ್ಯಾಂಕ್‌ಗಳಿಗೆ ಸಂಸದ ನಳಿನ್ ಸಲಹೆ

Update: 2020-12-01 11:05 GMT

ಮಂಗಳೂರು, ಡಿ.1: ಸರಕಾರಿ ಯೋಜನೆಗಳಡಿ ಸಾಲ ಮಂಜೂರಾತಿಗೆ ಸಂಬಂಧಿಸಿ ಬ್ಯಾಂಕ್‌ಗಳಿಗೆ ಹಲವಾರು ಸಮಸ್ಯೆಗಳಿವೆ. ಆದರೆ ಅದಕ್ಕೆ ಪರಿಹಾರವನ್ನು ಬ್ಯಾಂಕ್‌ಗಳು ಕಂಡುಕೊಳ್ಳಬೇಕು. ಮುದ್ರಾ ಸಾಲ ಯೋಜನೆ ಸೇರಿದಂತೆ ಸಾಲದ ಅರ್ಜಿಗಳನ್ನು ಬ್ಯಾಂಕ್‌ಗಳು ಸೂಕ್ತ ಕಾರಣಗಳಿಲ್ಲದೆ ತಿರಸ್ಕರಿಸುವ ಕೆಲಸ ಮಾಡಬಾರದು ಎಂದು ಸಂಸದ ನಳಿನ್ ಕುಮಾರ್ ಕಟೀಲು ಸಲಹೆ ನೀಡಿದ್ದಾರೆ.


ನಗರದ ಪುರಭವವನದಲ್ಲಿ ಇಂದು ಪಿಎಂ ಸ್ವನಿಧಿ ಸಾಲ- ಉತ್ಸವ ಹಾಗೂ ಕೇಂದ್ರ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಬೀದಿಬದಿ ವ್ಯಾಪಾರಿಗಳಿಗೆ ನೀಡಲಾಗುವ ಸ್ವನಿಧಿ ಯೋಜನೆಯಡಿ ಆಧಾರ್ ಕಾರ್ಡ್ ಹಾಗೂ ಸ್ಥಳೀಯಾಡಳಿತದ ಶಿಫಾರಸ್ಸು ಪತ್ರವಿದ್ದಲ್ಲಿ ಸಾಲ ಒದಗಿಸಬೇಕು. ಸಾಲ ನೀಡಲು ಸಾಧ್ಯವಾಗದ ಅರ್ಜಿಗಳಿಗೆ ಸಂಬಂಧಿಸಿ ಮನವರಿಕೆ ಮಾಡುವ ಕೆಲಸ ಮಾಡಬೇಕು ಎಂದು ಸಂಸದ ನಳಿನ್ ಕಾರ್ಯಕ್ರಮದಲ್ಲಿದ್ದ ಬ್ಯಾಂಕ್ ಮುಖ್ಯಸ್ಥರಿಗೆ ಸಲಹೆ ನೀಡಿದರು.

ಪ್ರಧಾನ ಮಂತ್ರಿ ಸ್ವನಿಧಿ ಸಾಲ ಯೋಜನೆಗೆ ಸಂಬಂಧಿಸಿ ಪ್ರಧಾನ ಮಂತ್ರಿಯ ಆಶಯ ಹಾಗೂ ಸೂಚನೆಗಳನ್ನು ಬ್ಯಾಂಕ್‌ಗಳು ಪಾಲಿಸಬೇಕು ಎಂದಿದ್ದಾರೆ. ಸ್ವನಿಧಿ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ 7921 ಗುರಿಯಿದ್ದು, ಈಗಾಗಲೇ 4176 ಅರ್ಜಿಗಳು ಸ್ವೀಕರಿಸಲಾಗಿದ್ದು, 1632 ಫಲಾನುಭವಿಗಳಿಗೆ ಸಾಲ ಮಂಜೂರಾತಿ ಆಗಿದೆ ಎಂದರು. ಜನಧನ್ ಹಾಗೂ ಮುದ್ರಾ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ದ.ಕ. ಜಿಲ್ಲೆ ನಂ. 1 ಸ್ಥಾನದಲ್ಲಿದ್ದು, ಈ ಯೋಜನೆಗಳು ಕೊರೋನ ಲಾಕ್‌ಡೌನ್‌ನಿಂದ ಕಂಗೆಟ್ಟಿರುವ ಬಡವರು, ಕಿರು ಉದ್ದಿಮೆದಾರರಿಗೆ ಆರ್ಥಿಕ ಚೈತನ್ಯ ತುಂಬುವಲ್ಲಿ ಸಹಕಾರಿಯಾಗಿದೆ ಎಂದರು. ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಮಾತನಾಡಿ, ಸಾಲ ಮರು ಪಾವತಿಯಲ್ಲಿ ದ.ಕ. ಜಿಲ್ಲೆಯ ಜನರು ಮುಂಚೂಣಿಯಲ್ಲಿದ್ದಾರೆ ಎಂದರು. ಶಾಸಕರಾದ ರಾಜೇಶ್ ನಾಯ್ಕಾ, ಡಾ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಹರೀಶ್ ಪೂಂಜ, ಅಂಗಾರ, ಉಮಾನಾಥ ಕೋಟ್ಯಾನ್, ಮೇಯರ್ ದಿವಾಕರ ಪಾಂಡೇಶ್ವರ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬ್ಯಾಂಕ್ ಆಫ್ ಬರೋಡಾದ ಸುಜಯ ಶೆಟ್ಟಿ, ಯೂನಿಯನ್ ಬ್ಯಾಂಕ್‌ನ ಎಂ.ವಿ.ಬಾಲಸುಬ್ರಹ್ಮಣ್ಯಂ, ಸ್ಟೇಟ್ ಬ್ಯಾಂಕ್‌ನ ರಾಜೇಶ್ ಗುಪ್ತಾ, ಕರ್ಣಾಟಕ ಬ್ಯಾಂಕ್‌ನ ಗೋಕುಲ್‌ದಾಸ್,ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್ ಮೊದಲಾದವರು ಉಪಸ್ಥಿತರಿದ್ದರು. ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಸ್ವಾಗತಿಸಿದರು. ಜಿಲ್ಲಾ ಲೀಡ್ ಬ್ಯಾಂಕ್‌ನ ವ್ಯವಸ್ಥಾಪಕ ಪ್ರವೀಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಐರಿನ್ ರೆಬೆಲ್ಲೋ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News