ಕ್ರಿಶ್ಚಿಯನ್ ಅಭಿವೃದ್ಧಿ ನಿಗಮಕ್ಕೆ ಪದಾಧಿಕಾರಿಗಳ ನೇಮಕಕ್ಕೆ ಒತ್ತಾಯಿಸಿ ಉಪವಾಸ ಡಿ.4ರಂದು ಧರಣಿ: ಐವನ್

Update: 2020-12-01 11:07 GMT

ಮಂಗಳೂರು, ಡಿ.1: ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ನೇಮಕಗೊಳಿಸಲು ಒತ್ತಾಯಿಸಿ ಡಿ.4ರಂದು ಬೆಳಗ್ಗೆ 9:30ರಿಂದ ಸಂಜೆ 5ರವರೆಗೆ ನಗರದ ಪುರಭವನದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಎದುರು ಉಪವಾಸ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಧರಣಿಯಲ್ಲಿ ಎಲ್ಲ ಸಮುದಾಯದವರೂ ಭಾಗವಹಿಸಲಿದ್ದಾರೆ. ಡಿ.7ರಂದು ಆರಂಭಗೊಳ್ಳಲಿರುವ ವಿಧಾನಸಭೆ ಅಧಿವೇಶನ ಸಂದರ್ಭದಲ್ಲೂ ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ಧರಣಿ ನಡೆಸುತ್ತೇವೆ ಎಂದರು.

2019-20ನೇ ಬಜೆಟ್‌ನಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮದ ಸ್ಥಾಪನೆಯ ಮುಖೇನ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳನ್ನು 200 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು ಎಂದು ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದರು. ಅದರಂತೆ ನಿಗಮ ಸ್ಥಾಪನೆಗೆ 75 ಕೋಟಿ ರೂ. ಮೀಸಲಿಡಲಾಗಿತ್ತು. ಬಳಿಕ ಎಂಒಎ ಮತ್ತು ಎಒಎ ತಯಾರಿಸಿ ಆರ್ಥಿಕ ಇಲಾಖೆ ಅನುಮೋದನೆ ಪಡೆಯುವ ಷರತ್ತುಗೊಳಪಟ್ಟು, ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಅನುಮೋದನೆ ನೀಡಿರುತ್ತಾರೆ. ಸರಕಾರದ ಪ್ರಧಾನ ಕಾರ್ಯದರ್ಶಿ ಅವರಿಂದ ಅನುಮೋದಿಸಲ್ಪಟ್ಟಿರುತ್ತದೆ. 2020ರ ಜೂ.16ರಂದು ಮುಖ್ಯಮಂತ್ರಿಯ ಆದೇಶದ ಮೇರೆಗೆ ಈ ಪ್ರಸ್ತಾವವನ್ನು ತಿರಸ್ಕರಿಸಲಾಗಿದೆ ಎಂದರು.

ರಾಜ್ಯದಲ್ಲಿ ಸುಮಾರು 30 ಲಕ್ಷ ಜನಸಂಖ್ಯೆ ಕ್ರೈಸ್ತ ಸಮುದಾಯದಲ್ಲಿದೆ. ನಿಗಮದ ಆದೇಶವನ್ನು ಕೂಡಲೇ ಹಿಂದಕ್ಕೆ ತರಿಸಿ, ನಿಗಮದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನೇಮಿಸಬೇಕು. ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ನೀಡಿದ 200 ಕೋಟಿ ರೂ. ಕೂಡಲೇ ಬಿಡುಗಡೆ ಮಾಡಬೇಕು. 2019-20-21ನೇ ಸಾಲಿನಲ್ಲಿ ಸ್ಥಗಿತಗೊಳಿಸಿದ್ದ ಎಲ್ಲ ಶೈಕ್ಷಣಿಕ ಯೋಜನೆಗಳಿಗೆ ಹಣ ಬಿಡುಗಡೆ ಮಾಡಬೇಕು ಎಂದು ಐವನ್ ಒತ್ತಾಯಿಸಿದರು.

ವಿದೇಶದಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ನೀಡುತ್ತಿದ್ದ 20 ಲಕ್ಷ ರೂ. ಯೋಜನೆಯನ್ನು ರದ್ದುಗೊಳಿಸಲಾಗಿತ್ತು. ಈ ಯೋಜನೆಯನ್ನು ಕೂಡಲೇ ಪ್ರಾರಂಭಿಸಬೇಕು. ಬಡವರಿಗೆ ನೀಡಲಾಗಿರುವ ಶ್ರಮಶಕ್ತಿ, ಸ್ವಉದ್ಯೋಗದ ಅಡಿಯಲ್ಲಿ ನೀಡುವ ಹಣವನ್ನು ಶೇ.80 ಕಡಿತಗೊಳಿಸಲಾಗಿದ್ದು, ಇದನ್ನು ಕೂಡಲೇ ಹಿಂದಿನಂತೆ ಸಂಪೂರ್ಣವಾಗಿ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಅರಿವು ಯೋಜನೆಯನ್ವಯ ಇಂಜಿನಿಯರ್, ಮೆಡಿಕಲ್ ಮತ್ತು ವೃತ್ತಿಪರ ಕೋರ್ಸ್‌ಗಳಿಗೆ ನೀಡುವ ಸಾಲದ ಮೊತ್ತವನ್ನು ಕಡಿತಗೊಳಿಸಲಾಗಿದ್ದು, ಅದನ್ನು ಹಿಂದಿನಂತೆ ನೀಡಬೇಕು ಮತ್ತು ಬಿಡುಗಡೆಗೊಳಿಸಬೇಕು. ಶೇ.4ರಷ್ಟು ಜನಸಂಖ್ಯೆಯಿರುವ ಕ್ರೈಸ್ತ ಸಮುದಾಯಕ್ಕೆ ಕನಿಷ್ಠ 500 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಬೇಕು, ಮುಂತಾದ ಬೇಡಿಕೆಗಳನ್ನು ಸರಕಾರದ ಮುಂದೆ ತರಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಆಲ್ವಿನ್ ಮಿನೇಜಸ್, ಜೇಮ್ಸ್ ಪ್ರವೀಣ್, ಆಶಿತ್ ಪಿರೇರ, ಆಲ್ವಿನ್ ಡಿಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News