ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಹಾಯ ವಿತರಣಾ ಕಾರ್ಯಕ್ರಮ

Update: 2020-12-01 11:43 GMT

ಮಂಗಳೂರು, ಡಿ.1: ಬಂಟ ಸಮಾಜದವರ ಜೊತೆ ಎಲ್ಲ ಸಮಾಜದ ದುರ್ಬಲರು, ಅಶಕ್ತರಿಗೆ ನೆರವು ನೀಡುವುದು ನಮ್ಮ ಸಂಘಟನೆಯ ಮೂಲ ಉದ್ದೇಶವಾಗಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದ್ದಾರೆ.

ಇಂದು ನಗರದ ಬಂಟ್ಸ್ ಹಾಸ್ಟೆಲ್ ಗೀತಾ ಎಸ್.ಎಂ.ಶೆಟ್ಟಿ ಸಭಾಂಗಣದಲ್ಲಿ ಹಮ್ಮಿಕೊಂಡ ಸಹಾಯ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಬಂಟರ ಸಮಾವೇಶದಲ್ಲಿ ಆರ್ಥಿಕವಾಗಿ ಅಸಹಾಯಕರಾಗಿರುವ ಸಮಾಜ ಬಾಂಧವರಿಗೆ ಆರ್ಥಿಕ ಸಹಾಯ, ವಸತಿ ನಿರ್ಮಾಣ, ಕೋರೋನಪೀಡಿತರಿಗೆ ಹಾಗೂ ಅಗತ್ಯವಿದ್ದವರಿಗೆ ವೈದ್ಯಕೀಯ ನೆರವು, ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಹೆಣ್ಣು ಮಕ್ಕಳ ವಿವಾಹಕ್ಕೆ ನೆರವು ಇತ್ಯಾದಿ ಸಹಾಯವನ್ನು ನೀಡಲು ಒಂದೂವರೆ ಕೋಟಿ ರೂ.ಗೂ ಅಧಿಕ ಮೊತ್ತದ ಸಮಾಜ ಕಲ್ಯಾಣ ಸಹಾಯ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಪೈಕಿ ನ.29ರಂದು ಉಡುಪಿಯಲ್ಲಿ 80 ಲಕ್ಷ ರೂ. ವೌಲ್ಯದ ಸಹಾಯಧನವನ್ನು ಈಗಾಗಲೇ ವಿತರಿಸಲಾಗಿದೆ. ಮಂಗಳೂರಿನಲ್ಲಿ 70 ಲಕ್ಷ ರೂ. ಮೊತ್ತದ ಸಹಾಯಧನ ಇಂದು ವಿತರಿಸಲಾಗುತ್ತಿದೆ. ವೆನ್ಲಾಕ್ ಆಸ್ಪತ್ರೆಗೆ ಬರುವ ಬಡವರಿಗೆ ಒಂದು ತಿಂಗಳ ಊಟದ ವ್ಯವಸ್ಥೆಗೆ ಎಂ. ಫ್ರೆಂಡ್ಸ್ ಸಂಘಟನೆಗೆ ಆರ್ಥಿಕ ನೆರವು ನೀಡಲಾಗಿದೆ.ವಸತಿ ಇಲ್ಲದ ಬಡವರಿಗೆ ವಸತಿ ನಿರ್ಮಿಸಿಕೊಡಲಾಗಿ.ೆ ಇಂತಹ ಸಮಾಜ ಸೇವಾ ಚಟುವಟಿಕೆಗಳನ್ನು ಮುಂದೆಯೂ ದಾನಿಗಳ ಸಹಕಾರದಿಂದ ಮುಂದುವರಿಸಿಕೊಂಡು ಹೋಗುವ ಗುರಿ ಇದೆ ಎಂದು ಅವರು ವಿವರಿಸಿದರು.

* ಬಂಟ ಜಾತಿಯವರನ್ನು ಹಿಂದುಳಿದ ವರ್ಗ 2(ಎ )ವಿಭಾಕ್ಕೆ ಸೇರ್ಪಡೆ ಮಾಡಬೇಕು. ಹಾಲಿ ಬಂಟ ಜಾತಿಗೆ ಸೇರಿದವರು ಹಿಂದುಳಿದ ವರ್ಗದ 3(ಬಿ) ವಿಭಾಗದಲ್ಲಿದ್ದಾರೆ. ಇದರಿಂದಾಗಿ ಬಂಟ ಸಮಾಜದ ಸಾಕಷ್ಟು ಬಡವರು ಮೀಸಲಾತಿಯ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಟ ಸಮಾಜದ ಮೀಸಲಾತಿಯನ್ನು 2 ಎ ವರ್ಗಕ್ಕೆ ಬದಲಾಯಿಸಲು ಸಂಸದರು, ಶಾಸಕರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುವುದಾಗಿ ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ.

ಈ ಸಹಾಯವನ್ನು ಕೇವಲ ಬಂಟ ಸಮಾಜದವರಿಗೆ ಮಾತ್ರವಲ್ಲದೆ ಇತರ ಸಮಾಜದ ಅರ್ಹರಿಗೂ ನೀಡಲಾಗುತ್ತಿದ್ದು ಜನರ ಬೇಡಿಕೆ ಮೇರೆಗೆ ಸುಮಾರು ಒಂದೂವರೆ ಕೋಟಿ ರೂ.ಗೂ ಅಧಿಕ ಮೊತ್ತವನ್ನು ಉಡುಪಿ, ಮಂಗಳೂರಿನ ಕಾರ್ಯಕ್ರಮದಲ್ಲಿ ವಿತರಿಸಲಾಗುತ್ತಿದೆ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಬಂಟ ಸಮಾಜ ಸಂಘಟನೆಯ ಮೂಲಕ ಕಷ್ಟದಲ್ಲಿರುವವರಿಗೆ ನೆರವು ನೀಡುವ ಮೂಲಕ ಇತರರಿಗೆ ಮಾದರಿಯಾಗಿದೆ. ಸಂಘಟನೆಯ ಮನವಿಯ ಬಗ್ಗೆ ಸರಕಾರದ ಹಂತದಲ್ಲಿ ಪ್ರಯತ್ನಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.

ಸಮಾರಂಭವನ್ನು ಉದ್ಘಾಟಿಸಿದ ಉದ್ಯಮಿ ಹಾಗೂ ಜಾಗತಿಕ ಬಂಟರ ಸಂಘದ ಒಕ್ಕೂಟದ ನಿರ್ದೇಶಕ ಕೆ.ಎಂ.ಶೆಟ್ಟಿ ಮಾತನಾಡಿ ಶುಭ ಹಾರೈಸಿದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಎಲ್ಲ ಜಾತಿ, ಧರ್ಮದ ಜನರನ್ನು ದ್ವೇಷಿಸದೆ ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ ಬದುಕುವುದು ಬಂಟ ಸಮಾಜದ ಸಂಘಟನೆಯ ಗುರಿಯಾಗಬೇಕು ಈ ನಿಟ್ಟಿನಲ್ಲಿ ಜಾಗತಿಕ ಬಂಟರ ಸಂಘಟನೆಯ ಯೋಜನೆಗಳು ಶ್ಲಾಘನೀಯ ಎಂದರು.

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ, ಬಂಟ ಸಮಾಜ ಈ ದೇಶದ ಸ್ವಾತಂತ್ರ ಹೋರಾಟದಿಂದ ತೊಡಗಿ ಉದ್ಯಮ ಶಿಕ್ಷಣ, ವೈದ್ಯಕೀಯ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದೆ ಎಂದರು.

ಶಾಸಕರಾದ ಯು.ಟಿ.ಖಾದರ್, ರಾಜೇಶ್ ನಾಯ್ಕಾ, ಉಮಾನಾಥ ಕೋಟ್ಯಾನ್ ಉಪಸ್ಥಿತರಿದ್ದರು.

ಇದೇವೇಳೆ ಸಾಧಕರಾದ ಲಿಂಗಪ್ಪ ಶೇರಿಗಾರ್ ಕಟೀಲು, ಗೋಪಾಲಕೃಷ್ಣ, ಡಾ.ಅಕ್ಷತಾ ವಿ. ರೈ, ಅಶೋಕ್ ಪಕ್ಕಳ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜಾ, ಮೈಮುನಾ ಫೌಂಡೇಶನ್‌ನ ನಿರ್ದೇಶಕ ಮುಹಮ್ಮದ್ ಆಸಿಫ್ ಸಾಣೂರು, ಕಲಾವಿದ ಪಟ್ಲ ಸತೀಶ್ ಶೆಟ್ಟಿ ಮತ್ತಿತರರು ಸನ್ಮಾನಿಸಲಾಯಿತು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ದ.ಕ. ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಗೌರವ ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಸತೀಶ್ ಅಡಪ, ನಗ್ರಿಗುತ್ತು ವಿವೇಕ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News