×
Ad

ಸುಲಿಗೆ ಪ್ರಕರಣದ ಆರೋಪಿಗೆ ಗುಂಡೇಟು

Update: 2020-12-01 17:22 IST

ಬೆಂಗಳೂರು, ಡಿ.1: ಸುಲಿಗೆ ಆರೋಪ ಪ್ರಕರಣ ಸಂಬಂಧ ಆರೋಪಿ ಕಾಲಿಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಇಲ್ಲಿನ ನಂದಿನಿ ಲೇಔಟ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ನಂದಿನಿ ಲೇಔಟ್‍ನ ಅನೂಬಾ(24) ಬಂಧಿತ ಆರೋಪಿಯಾಗಿದ್ದು, ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.

ಇಲ್ಲಿನ ಮಹಾಲಕ್ಷ್ಮೀ ಲೇಔಟ್ ಸೇರಿ ಇತರ ಪೊಲೀಸ್ ಠಾಣಾ ವ್ಯಾಪ್ತಿಯ 7ಕ್ಕೂ ಹೆಚ್ಚು ಕೊಲೆಯತ್ನ, ಸರಗಳವು ಸುಲಿಗೆ ಬೆದರಿಕೆ ಹಲ್ಲೆ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯು ಜೈಲಿಗೆ ಹೋಗಿ ಒಂದು ತಿಂಗಳ ಹಿಂದಷ್ಟೇ ಜಾಮಿನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ. ಕಳೆದ ಹತ್ತು ದಿನಗಳಲ್ಲಿ ಮತ್ತೆ ಸಹಚರರ ಗುಂಪು ಕಟ್ಟಿಕೊಂಡು ಲಾರಿ ಚಾಲಕನೋರ್ವನಿಗೆ ಚಾಕುವಿನಿಂದ ಇರಿದು 30 ಸಾವಿರ ರೂ. ದೋಚಿದ್ದ ಆರೋಪದಡಿ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ದೂರಿನ್ವಯ ಅನೂಬ್ ಸಹಚರ ಅನ್ವರ್ ನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಸಹಚರ ಅನ್ವರ್ ನೀಡಿದ ಮಾಹಿತಿ ಮೇರೆಗೆ ಮಂಗಳವಾರ ಮುಂಜಾನೆ ನಂದಿನಿ ಲೇಔಟ್ ಬಳಿಯ ಮೇಲ್ಸುತುವೆ ಬಳಿ ಅನೂಬ್ ಇರುವ ಖಚಿತ ಮಾಹಿತಿಯಂತೆ ಪೊಲೀಸರ ತಂಡ ಬಂಧಿಸಲು ಮುಂದಾದಾಗ ಅವರ ಮೇಲೆಯೇ ಮಾರಕಾಸ್ತ್ರಗಳಿಂದ ದಾಳಿ ನಡೆಸಲು ಮುಂದಾಗಿದ್ದಾನೆ.

ಈ ವೇಳೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಮತ್ತೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಆರೋಪಿ ಅನೂಬ್‍ಗೆ ಪಿಎಸ್ಸೈ ಜೋಗಾನಂದ್ ಮತ್ತೊಂದು ಸುತ್ತು ಗುಂಡು ಹಾರಿಸಿದ್ದು, ಅದು ಬಲಗಾಲಿಗೆ ತಗುಲಿ ಸ್ಥಳದಲ್ಲೇ ಕುಸಿದುಬಿದ್ದಿದ್ದಾನೆ. ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಗಾಯಾಳು ಮುಖ್ಯಪೇದೆ ಅಭಿಷೇಕ್‍ಗೂ ಚಿಕಿತ್ಸೆ ಕೊಡಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News