ದೆಹಲಿಯ ರೈತರ ಹೋರಾಟ ಬೆಂಬಲಿಸಿ ಉಡುಪಿಯಲ್ಲಿ ಧರಣಿ

Update: 2020-12-01 12:11 GMT

ಉಡುಪಿ, ಡಿ.1: ರೈತ ವಿರೋಧಿ ಕೃಷಿ ಮತ್ತು ಭೂಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಮೇಲೆ ಮೋದಿ ಸರಕಾರ ನಡೆಸಿರುವ ದಾಳಿಯನ್ನು ಖಂಡಿಸಿ ಹಾಗೂ ರೈತರ ಹೋರಾಟವನ್ನು ಬೆಂಬಲಿಸಿ ಸಿಐಟಿಯು, ಕರ್ನಾಟಕ ಪ್ರಾಂತ ಕ್ರಷಿಕೂಲಿಕಾರರ ಸಂಘ, ಅಖಿಲ ಭಾರತ ಕಿಸಾನ್ ಸಂಘದ ನೇತೃತ್ವದಲ್ಲಿ ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಸಭೆಯನ್ನುದ್ದೇಶಿಸಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ದೇಶದ ದೊಡ್ಡ ಬಂಡವಾಳ ಗಾರರಿಗೆ ದೇಶದ ಜನರ ಸಂಪತ್ತನ್ನು ಮಾರಾಟ ಮಾಡುವುದು ಬಿಜೆಪಿ ಪಕ್ಷದ ದೇಶಭಕ್ತಿ ಎಂಬುವುದು ಸಾಬೀತಾಗಿದೆ. ಇಂತಹ ದೇಶಭಕ್ತಿಯು ರೈತರು, ಕಾರ್ಮಿಕರು, ಕೂಲಿಕಾರರಿಗೆ ಬಹುದೊಡ್ಡ ಅಪಾಯ ತರಲಿದೆ. ಬಿಜೆಪಿಯ ಬಂಡವಾಳಗಾರರ ಪರವಾದ ಇಂತಹ ರಾಷ್ಟ್ರೀಯವಾದ ಒಪ್ಪಲು ಸಾಧ್ಯವಿಲ್ಲ ಎಂದು ದೂರಿದರು.

ಸಣ್ಣ ಕೈಗಾರಿಕೆಗಳು ನಾಶವಾಗುತ್ತಿದ್ದು, ನಿರುದ್ಯೋಗ ಉಲ್ಬಣಗೊಂಡು ಜಿಡಿಪಿ ಕುಸಿಯುತ್ತಿದೆ. ಜನರ ಆದಾಯ ಸ್ಥಗಿತಗೊಂಡಿದೆ. ರೈತ ವಿರೋಧಿ, ಭೂಸುಧಾರಣಾ ತಿದ್ದುಪಡಿ ಕಾಯ್ದೆಗಳು ಜನರಿಗೆ ಮತ್ತಷ್ಟು ಸಂಕಷ್ಟ ತರಲಿದೆ. ಇಂತಹ ನೀತಿಗಳ ವಿರುದ್ದ ದಹಲಿ ರೈತರು ಹೋರಾಟ ನಡೆಸುತ್ತಿದ್ದಾರೆ. ಸರಕಾರ ಕೂಡಲೇ ಅವರ ಮೇಲೆ ದಾಖಲಿಸಿರುವ ಕೇಸುಗಳನ್ನು ವಾಪಾಸ್ಸು ಪಡೆಯ ಬೇಕು. ಕಾರ್ಪೋರೇಟ್ ಪರ ನೀತಿ ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಯಿತು. ಸಿಐಟಿಯು ಮುಖಂಡರಾದ ಕೆ.ಶಂಕರ್, ಎಚ್.ನರಸಿಂಹ, ಶಶಿಧರ ಗೊಲ್ಲ, ಮಹಾಬಲ ವಡೇರಹೋಬಳಿ, ಬಲ್ಕೀಸ್, ಕೃಷಿಕೂಲಿಕಾರರ ಸಂಘದ ವೆಂಕಟೇಶ್ ಕೋಣಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News