ಕೃಷಿ ಕಾನೂನುಗಳ ಕುರಿತ ಚರ್ಚೆಗೆ ಸಮಿತಿ ರಚಿಸುವ ಕೇಂದ್ರದ ಸಲಹೆ ತಿರಸ್ಕರಿಸಿದ ರೈತ ಸಂಘಟನೆಗಳು

Update: 2020-12-01 18:27 GMT
ಫೋಟೊ ಕೃಪೆ: twitter.com

ಹೊಸದಿಲ್ಲಿ: ರೈತರ ಪ್ರತಿನಿಧಿಗಳು ಹಾಗೂ ಕೇಂದ್ರ ಸರಕಾರದ ನಡುವೆ ಇಲ್ಲಿನ ವಿಜ್ಞಾನ ಭವನದಲ್ಲಿ ಮಂಗಳವಾರ ಮಾತುಕತೆ ನಡೆದಿದ್ದು, ನೂತನ ಕೃಷಿ ಕಾನೂನುಗಳ ಕುರಿತು ಮರು ಚಿಂತಿಸಬೇಕೆಂದು ರೈತ ಸಂಘಟನೆಗಳು ಸಭೆಯಲ್ಲಿ ಬೇಡಿಕೆ ಇಟ್ಟಿವೆ. ಕೃಷಿ ಕಾನೂನುಗಳ ಕುರಿತ ಗೊಂದಲವನ್ನು ನಿವಾರಿಸಲು, ಆ ಕುರಿತು ಚರ್ಚಿಸಲು ರೈತ ಸಂಘಟನೆಗಳು ಹಾಗೂ ಸರಕಾರದ ಪ್ರತಿನಿಧಿಗಳಿರುವ ಸಮಿತಿಯೊಂದನ್ನು ರಚಿಸುವ ಕುರಿತು ಸರಕಾರ ಸಲಹೆ ನೀಡಿದೆ. ಆದರೆ ಈ ಸಲಹೆಯನ್ನು ರೈತರು ತಿರಸ್ಕರಿಸಿದ್ದಾರೆ ಎಂದು  ಮೂಲಗಳು ತಿಳಿಸಿವೆ.

ಪ್ರತಿಭಟನಾನಿರತ ರೈತರ 30ಕ್ಕೂ ಅಧಿಕ ಸಂಘಟನೆಗಳು ಪೂರ್ವ ಷರತ್ತು ಇಲ್ಲದೆ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸಲು ಒಪ್ಪಿಕೊಂಡಿದ್ದವು. ಇದೇ ವೇಳೆ ಇಂದಿನ ಮಾತುಕತೆಯು ವಿಫಲವಾಗಿದ್ದು, ಗುರುವಾರ ಮತ್ತೊಮ್ಮೆ ರೈತರು ಹಾಗೂ ಸಚಿವರು ಸಭೆ ನಡೆಸಲಿದ್ದಾರೆ.

ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ ಕೆಲವು ದಿನಗಳಿಂದ ದಿಲ್ಲಿ ಸುತ್ತಮುತ್ತ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗಿನ ಮಾತುಕತೆಯಲ್ಲಿ ಕೃಷಿ ಸಚಿವ ನರೇಂದ್ರ ತೋಮರ್, ಕೇಂದ್ರ ವಾಣಿಜ್ಯ, ಕೈಗಾರಿಕಾ ಸಚಿವ  ಪಿಯೂಷ್ ಗೋಯಲ್ ಭಾಗವಹಿಸಿದ್ದರು.

ನಮಗೆ ನೀವು ಒಳ್ಳೆಯದನ್ನು ಮಾಡುವುದು ಬೇಡ

ಕೃಷಿ ಕಾನೂನು ಕುರಿತು ಸಮಿತಿ ರಚಿಸುವ ಸಮಯ ಇದಲ್ಲ ಎಂದು ರೈತರ ಪ್ರತಿನಿಧಿಗಳು ಕೇಂದ್ರ ಸರಕಾರಕ್ಕೆ ತಿಳಿಸಿದವು ಎಂದು ಮೂಲಗಳು ತಿಳಿಸಿವೆ.

“ದೊಡ್ಡ ಕಾರ್ಪೋರೇಟ್ ಗಳು ನಮ್ಮ ಭೂಮಿಯನ್ನು ತೆಗೆದುಕೊಳ್ಳಬಹುದಾದ ಕಾನೂನನ್ನು ನೀವು(ಕೇಂದ್ರ)ತಂದಿದ್ದೀರಿ. ಇದರಲ್ಲಿ ಕಾಪೋರೇಟ್ ಗಳನ್ನು ಸೇರಿಸಬೇಡಿ. ಈಗ ಸಮಿತಿ ರಚಿಸುವ ಸಮಯವಲ್ಲ. ನಾವು ರೈತರಿಗೆ ಒಳ್ಳೆಯದನ್ನು ಮಾಡುತ್ತಿದ್ದೇವೆ ಎಂದು ನೀವು ಹೇಳುತ್ತಿದ್ದೀರಿ. ನೀವು ನಮಗೆ ಒಳ್ಳೆಯದನ್ನು ಮಾಡುವುದು ಬೇಡ ಎಂದು ನಾವು ನಿಮಗೆ ಹೇಳುತ್ತಿದ್ದೇವೆ'' ಎಂದು ಕೇಂದ್ರದೊಂದಿಗಿನ ಮಾತುಕತೆ ವೇಳೆ ರೈತ ಪ್ರತಿನಿಧಿಗಳು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನಮ್ಮ ‘ಮನ್ ಕಿ ಬಾತ್’ ಆಲಿಸಲಿ: ರೈತ ಮುಖಂಡರ ಒತ್ತಾಯ

ನಿರ್ಣಾಯಕ ಹೋರಾಟ ನಡೆಸುವ ಉದ್ದೇಶದಿಂದ ತಾವು ರಾಷ್ಟ್ರೀಯ ರಾಜಧಾನಿ ದಿಲ್ಲಿಗೆ ಆಗಮಿಸಿದ್ದೇವೆ ಎಂದು ಪ್ರತಿಭಟನಾ ರೈತ ಮುಖಂಡರು ಹೇಳಿದ್ದಾರೆ. ತಿಂಗಳಿಗೊಮ್ಮೆ ತಮ್ಮ ‘ಮನ್ ಕಿ ಬಾತ್’ ಪ್ರಸ್ತುತಪಡಿಸುವ ಪ್ರಧಾನಿ ನರೇಂದ್ರ ಮೋದಿಯವರು ಈಗ ನಮ್ಮ ಮನ್ ಕಿ ಬಾತ್’ ಆಲಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News