ಉಡುಪಿ ಜಿಲ್ಲೆಯಲ್ಲಿ 14 ಮಂದಿಗೆ ಕೊರೋನ ಪಾಸಿಟಿವ್

Update: 2020-12-01 14:54 GMT

ಉಡುಪಿ, ಡಿ.1: ಜಿಲ್ಲೆಯಲ್ಲಿ ಇಂದು 14 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. 22 ಮಂದಿ ಚಿಕಿತ್ಸೆಯಿಂದ ಗುಣಮುಖರಾದರೆ, ಒಟ್ಟು 197 ಮಂದಿ ಇನ್ನೂ ಕೊರೋನ ಸೋಂಕಿಗೆ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಪಾಸಿಟಿವ್ ಬಂದವರಲ್ಲಿ 9 ಮಂದಿ ಪುರುಷರು ಹಾಗೂ 5 ಮಂದಿ ಮಹಿಳೆಯರು. ಇವರಲ್ಲಿ ಒಬ್ಬ ಪುರುಷರು ಹಾಗೂ ಇಬ್ಬರು ಮಹಿಳೆಯರಲ್ಲಿ ರೋಗದ ಯಾವುದೇ ಲಕ್ಷಣಗಳಿಲ್ಲ. ಉಡುಪಿ ತಾಲೂಕಿನ 6, ಕುಂದಾಪುರ ತಾಲೂಕಿನ 5 ಹಾಗೂ ಕಾರ್ಕಳ ತಾಲೂಕಿನ ಮೂವರು ಕೊರೋನಕ್ಕೆ ಪಾಸಿಟಿವ್ ಬಂದಿದ್ದಾರೆ ಎಂದು ಡಾ.ಸೂಡ ತಿಳಿಸಿದರು.

22 ಮಂದಿ ಗುಣಮುಖ:  ಸೋಮವಾರ ಜಿಲ್ಲೆಯಲ್ಲಿ 22 ಮಂದಿ ಚಿಕಿತ್ಸೆ ಬಳಿಕ ರೋಗದಿಂದ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಸೋಂಕಿನಿಂದ ಮುಕ್ತರಾದವರ ಒಟ್ಟು ಸಂಖ್ಯೆ ಈಗ 22,320 ಆಗಿದೆ. ಜಿಲ್ಲೆಯಲ್ಲಿ ಸದ್ಯ 197 ಮಂದಿ ಕೋವಿಡ್‌ಗೆ ಚಿಕಿತ್ಸೆಯಲ್ಲಿದ್ದಾರೆ ಎಂದರು.

1841 ನೆಗೆಟಿವ್: ಜಿಲ್ಲೆಯಲ್ಲಿ ಸೋಮವಾರ ಒಟ್ಟು 1855 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 1841 ಮಂದಿ ನೆಗೆಟಿವ್ ಫಲಿತಾಂಶ ಪಡೆದಿದ್ದಾರೆ. 14 (ಐಸಿಎಂಆರ್ ವರದಿ)ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 22,704ಕ್ಕೇರಿದೆ ಎಂದವರು ತಿಳಿಸಿದರು.

ಜಿಲ್ಲೆಯಲ್ಲಿ ಸೋಮವಾರದವರೆಗೆ ಒಟ್ಟು 2,47,256 ಮಂದಿ ಕೋವಿಡ್ ಪರೀಕ್ಷೆ ಗೊಳಗಾಗಿದ್ದಾರೆ. ಇವರಲ್ಲಿ 2,24,552 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿವೆ. ಒಟ್ಟು 22,704 ಮಂದಿ ಪಾಸಿಟಿವ್ ಬಂದಿದ್ದರೆ, ಈ ಪೈಕಿ 22,320 ಮಂದಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ. ಕೋವಿಡ್‌ಗೆ ಜಿಲ್ಲೆಯಲ್ಲಿ ಈವರೆಗೆ ಬಲಿಯಾದವರ ಒಟ್ಟು ಸಂಖ್ಯೆ 187 ಮಾತ್ರ. ಜಿಲ್ಲೆಯಲ್ಲಿ ಇಂದು ಸಹ ಕೋವಿಡ್‌ನಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆಯ ದೈನಂದಿನ ಬುಲೆಟಿನ್ ತಿಳಿಸಿದೆ.

16,000 ವಿದ್ಯಾರ್ಥಿಗಳು, ಪ್ರಾಧ್ಯಾಪಕರಿಗೆ ಕೋವಿಡ್ ಪರೀಕ್ಷೆ

ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 16,000 ಕಾಲೇಜು ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದ್ದು, ಇವರಲ್ಲಿ ಒಟ್ಟು 57 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 58 ಮಂದಿ ಪಾಸಿಟಿವ್ ಬಂದಿದ್ದಾರೆ ಎಂದು ಡಿಎಚ್‌ಓ ಡಾ.ಸೂಡ ತಿಳಿಸಿದ್ದಾರೆ.

ಪಾಸಿಟಿವ್ ಬಂದ ವಿದ್ಯಾರ್ಥಿಗಳಲ್ಲಿ ಮಣಿಪಾಲ ಮಾಹೆ ವಿವಿಗೆ ಸೇರಿದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳೇ ಅಧಿಕ (40) ಸಂಖ್ಯೆಯಲ್ಲಿದ್ದಾರೆ. ಉಳಿದಂತೆ ಕಾರ್ಕಳ, ಶಿರ್ವ, ಉಡುಪಿ, ಕಾಪು ಹಾಗೂ ಮಂಗಳೂರಿನ ಒಬ್ಬ ವಿದ್ಯಾರ್ಥಿ ಸೇರಿದ್ದಾರೆ. ಒಬ್ಬ ಪ್ರಾದ್ಯಾಪಕರೂ ಪಾಸಿಟಿವ್ ಬಂದಿದ್ದಾರೆ ಎಂದವರು ನುಡಿದರು.

ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳನ್ನು ನಡೆಸಲು ಕಾಲೇಜುಗಳಿಗೆ ಸರಕಾರ ಅನುಮತಿ ನೀಡಿದ್ದು, ಹೆತ್ತವರ ಅನುಮತಿ ಪತ್ರದೊಂದಿಗೆ ಕೋವಿಡ್‌ಗೆ ನೆಗೆಟಿವ್ ವರದಿಯೂ ಕಡ್ಡಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News