ಮೀನುಗಾರಿಕಾ ಬೋಟು ದುರಂತ : 15 ವರ್ಷದ ಹಿಂದೆ ನಡೆದಿತ್ತು ಇಂಥದ್ದೇ ಬೋಟು ದುರಂತ !

Update: 2020-12-01 15:17 GMT

ಮಂಗಳೂರು, ಡಿ.1: ಸೋಮವಾರ ನಸುಕಿನ ಜಾವ ಪರ್ಸಿನ್ ಬೋಟು ಮುಳುಗಿ ದುರಂತ ಸಂಭವಿಸಿದೆ. ಹೊಟ್ಟೆಪಾಡಿಗಾಗಿ ಮೀನುಗಾರಿಕೆಗೆ ತೆರಳಿದವರ ಕುಟುಂಬಗಳು ಸಂಕಷ್ಟದಲ್ಲಿವೆ. ಅವಘಡವು ಬಹಳ ನೋವಿನ ವಿಚಾರ. ಇಂತಹದ್ದೇ ದುರಂತವೊಂದು ಸುಮಾರು 15 ವರ್ಷಗಳ ಹಿಂದೆ ಸಂಭವಿಸಿತ್ತು !

ಹೌದು. ಕಳೆದ ಸುಮಾರು 15 ವರ್ಷಗಳ ಹಿಂದೆಯೂ ಕಡಲಲ್ಲಿ ಸುಮಾರು ಎಂಟಕ್ಕೂ ಅಧಿಕ ಮೀನುಗಾರರು ಜಲಸಮಾಧಿಯಾಗಿ ದ್ದರು. ಬಳಿಕ ಅಂತಹ ದೊಡ್ಡ ಪ್ರಮಾಣದ ದುರಂತ ಸಂಭವಿಸಿರಲಿಲ್ಲ ಎಂದು ರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗದ ಅಧ್ಯಕ್ಷ ನಿತಿನ್‌ಕುಮಾರ್ ಈ ಹಿಂದೆ ನಡೆದ ದುರಂತವನ್ನು ‘ವಾರ್ತಾಭಾರತಿ’ ಪತ್ರಿಕೆಯ ಮುಂದೆ ಬಿಚ್ಚಿಟ್ಟರು.

ಅದೇ ದುರಂತವನ್ನು ಸೋಮವಾರ ನಡೆದ ಬೋಟು ಮುಳುಗಡೆಯಾದುದು ನೆನಪಿಸುತ್ತಿದೆ. ಇಲ್ಲಿಯವರೆಗೆ ಬೋಟು ಮುಳುಗಿ ಒಬ್ಬರು, ಇಬ್ಬರು ನಾಪತ್ತೆಯಾಗುತ್ತಿದ್ದರು. ಈಗ ಆರು ಮಂದಿ ನಾಪತ್ತೆಯಾಗಿರುವುದು ತುಂಬ ನೋವಿನ ಸಂಗತಿಯಾಗಿದೆ. ಸಮುದ್ರದಲ್ಲಿ ನಾಪತ್ತೆಯಾದವರು ಒಂದು ವೇಳೆ ಮೃತಪಟ್ಟಲ್ಲಿ ದೇಹವು 24 ಗಂಟೆಯಲ್ಲೇ (ಬುಧವಾರ) ಮೇಲೆ ಬರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಮಂಗಳವಾರ ಸುಮಾರು 10ಕ್ಕೂ ಹೆಚ್ಚು ಪರ್ಸಿನ್ ಬೋಟುಗಳು ಸಹಿತ ಕರಾವಳಿ ರಕ್ಷಣಾ ಪಡೆ, ಸ್ಥಳೀಯ ಮುಳುಗು ತಜ್ಞರು ಪತ್ತೆ ಕಾರ್ಯ ನಡೆಸಿದ್ದು, ಇಳಿಹೊತ್ತಿನ ಬಳಿಕ ಪತ್ತೆ ಕಾರ್ಯವನ್ನು ಮೊಟಕುಗೊಳಿಸಲಾಗಿದೆ. ಬುಧವಾರ ನಸುಕಿನ ಜಾವವೇ 80ಕ್ಕೂ ಅಧಿಕ ಪರ್ಸಿನ್ ಬೋಟುಗಳು ಕಾರ್ಯಾಚರಣೆಗೆ ಅನುವಾಗಲಿವೆ ಎಂದರು.

ಆಳ ಸಮುದ್ರದಲ್ಲಿ ಬಲೆ ಪತ್ತೆ: ಕಡಲಲ್ಲಿ ದುರಂತಕ್ಕೀಡಾದ ಪರ್ಸಿನ್ ಬೋಟು ಸೋಮವಾರ ದಿನವಿಡೀ ಮೀನುಗಾರಿಕೆಯ ಹುಡುಕಾಟದಲ್ಲಿತ್ತು. ಸಂಜೆವರೆಗೂ ಮೀನಿನ ಬೇಟೆಯಲ್ಲಿ ತೊಡಗಿದ್ದ ಮೀನುಗಾರರು ಎಲ್ಲವನ್ನೂ ಬೋಟಿಗೆ ತುಂಬಿಸಿಕೊಳ್ಳುತ್ತಿದ್ದರು. ಇದನ್ನು ಇತರ ಮೀನುಗಾರರು ನೋಡಿದ್ದರು.

ಮಂಗಳವಾರ ಬೋಟ್ ಮುಳುಗಡೆಯಾಗಿ ಮೀನುಗಾರರು ನಾಪತ್ತೆಯಾದ ಮಾಹಿತಿ ತಿಳಿದ ತಕ್ಷಣ ಮೀನುಗಾರರು ಅದೇ ಪ್ರದೇಶದ ಆಳಸಮುದ್ರದಲ್ಲಿ ಹುಡುಕಾಟ ನಡೆಸಿದರು. ಈ ಸಂದರ್ಭ ಮೀನು ಹಿಡಿಯಲು ಬಳಸಿದ ಬಲೆ ಪತ್ತೆಯಾಗಿದೆ. ಆದರೆ ಬಲೆಯನ್ನು ಮೇಲೆ ಎತ್ತಿಲ್ಲ. ಅದೇ ಪ್ರದೇಶದಲ್ಲಿ ಬೋಟು ಮುಳುಗಡೆಯಾಗಿದೆ. ಪತ್ತೆಯಾದ ಬಲೆಯಲ್ಲಿ ಭಾರೀ ಮೀನು ಇರುವುದು ಕಂಡುಬಂದಿದೆ. ಬಲೆಯಲ್ಲೇ ನಾಪತ್ತೆಯಾದವರು ಸಿಲುಕಿರುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಇಲ್ಲಿಯವರೆಗೂ ಖಚಿತವಾಗಿಲ್ಲ.

ಡಿಂಗಿ ಸಹಾಯದಿಂದ ಬದುಕುಳಿದರು: ‘ಶ್ರೀರಕ್ಷಾ’ ಹೆಸರಿನ ಬೋಟು ನಸುಕಿನ ಜಾವ 5 ಗಂಟೆ ಸುಮಾರಿಗೆ ಮೀನುಗಾರಿಕೆಗೆ ತೆರಳಿತ್ತು. ಬೆಳಗ್ಗೆ 7 ಗಂಟೆ ಸುಮಾರಿಗೆ ಆಳ ಸಮುದ್ರದಲ್ಲಿ ಮೀನಿಗೆ ಬಲೆ ಬೀಸಿದ್ದು, ಮಧ್ಯಾಹ್ನದ ವೇಳೆಗೆ ಬಲೆ ಎಳೆಯುವ ಕಾರ್ಯ ಆರಂಭಿಸಿದ್ದರು. ಸಂಜೆ ವೇಳೆಗೆ ಬಲೆ ಎಳೆದು ಬಲೆಯಿಂದ ಮೀನು ಬೇರ್ಪಡಿಸುವ ಕಾರ್ಯ ಶುರು ಮಾಡಿದ್ದರು.
ತಡರಾತ್ರಿ ವೇಳೆಗೆ ಮೀನು ಬೇರ್ಪಡಿಸಿ ವಾಪಸ್ ಮಂಗಳೂರಿನ ದಕ್ಕೆಗೆ ಹೊರಡಲು ಅನುವಾಗಿದ್ದರು. ಈ ಸಂದರ್ಭ ಕಲ್ಲಿಗೆ ಬೋಟ್ ಢಿಕ್ಕಿಯಾಗಿದೆ ಎಂದು ತಿಳಿದುಬಂದಿದೆ. ಇನ್ನು ಕೆಲ ಮೂಲಗಳ ಪ್ರಕಾರ ಭಾರೀ ಗಾಳಿಗೆ ಬೋಟು ಸಿಲುಕಿ ಮುಳುಗಡೆಯಾಗಿದೆ ಎನ್ನಲಾಗಿದೆ.

ಸಮುದ್ರದ ಮಧ್ಯೆ ಬೋಟು ಮುಳುಗಡೆಯಾಗುತ್ತಿದ್ದಂತೆ ಬೋಟ್‌ನಲ್ಲಿ 25ರ ಪೈಕಿ 19 ಮಂದಿ ಡಿಂಗಿ (ಸಣ್ಣ ದೋಣಿ) ಸಹಾಯದಿಂದ ದಡ ಸೇರಿಕೊಂಡು ಬದುಕುಳಿದಿದ್ದಾರೆ. ಬುಧವಾರ ಪತ್ತೆ ಕಾರ್ಯ ಮುಂದುವರಿಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News