ಪಿಎಂ ಕೇರ್ಸ್ ನಿಧಿಯ ಹಣ ಎಲ್ಲಿ ಹೋಯಿತು?: ಮಮತಾ ಬ್ಯಾನರ್ಜಿ ಪ್ರಶ್ನೆ
ಕೋಲ್ಕತಾ,ಡಿ.1: ಕೇಂದ್ರ ಸರಕಾರವು ದೇಶದ ಒಕ್ಕೂಟ ಸ್ವರೂಪವನ್ನು ಹಾಳುಗೆಡವಲು ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಮಂಗಳವಾರ ಇಲ್ಲಿ ಆರೋಪಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು,ಪಿಎಂ ಕೇರ್ಸ್ ನಿಧಿಯ ಹಣವೆಲ್ಲಿದೆ ಎಂದು ಪ್ರಶ್ನಿಸಿದರು.
ತನ್ನ ಸರಕಾರವು ಕೇಂದ್ರದ ಬಿಜೆಪಿ ನೇತೃತ್ವದ ತಾಳಕ್ಕೆ ತಕ್ಕಂತೆ ಕುಣಿಯುವುದಿಲ್ಲ ಎಂದೂ ಅವರು ಹೇಳಿದರು.
ಸಂಪುಟ ಸಭೆಯ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಬ್ಯಾನರ್ಜಿ,ಪಿಎಂ ಕೇರ್ಸ್ ನಿಧಿಯ ಎಲ್ಲ ಹಣ ಎಲ್ಲಿ ಹೋಗಿದೆ? ಈ ನಿಧಿಯ ಭವಿಷ್ಯ ಯಾರಿಗಾದರೂ ಗೊತ್ತಿದೆಯೇ? ಕೋಟ್ಯಂತರ ರೂಪಾಯಿಗಳು ಏನಾದವು? ಲೆಕ್ಕ ಪರಿಶೋಧನೆ ಯನ್ನೇಕೆ ನಡೆಸುತ್ತಿಲ್ಲ? ಕೇಂದ್ರವು ನಮಗೆ ಭಾಷಣ ಬಿಗಿಯುತ್ತಿದೆ. ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಟಕ್ಕೆ ಅದು ನಮಗೇನು ನೀಡಿದೆ ಎಂದು ಪ್ರಶ್ನಿಸಿದರು.
ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಕೇಂದ್ರವು ಪ.ಬಂಗಾಳವನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿದೆ ಎಂದು ಆರೋಪಿಸಿದ ಅವರು,ರಾಜ್ಯದಲ್ಲಿಯ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯು ಇತರ ಹಲವಾರು ರಾಜ್ಯಗಳಿಗಿಂತ ಉತ್ತಮವಾಗಿದೆ ಎಂದರು.