ಇಸ್ರೇಲ್ ವಿಮಾನಗಳಿಗೆ ವಾಯುಪ್ರದೇಶ ದಾಟಲು ಸೌದಿ ಅನುಮತಿ: ಅಮೆರಿಕದ ಹಿರಿಯ ಅಧಿಕಾರಿ ಹೇಳಿಕೆ

Update: 2020-12-01 16:19 GMT

ವಾಶಿಂಗ್ಟನ್, ಡಿ. 1: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಹೋಗುವ ಇಸ್ರೇಲ್‌ನ ವಾಣಿಜ್ಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ದಾಟಿ ಹೋಗಲು ಸೌದಿ ಅರೇಬಿಯ ಸೋಮವಾರ ಒಪ್ಪಿಕೊಂಡಿದೆ ಎಂದು ಅಮೆರಿಕದ ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸೌದಿ ಅರೇಬಿಯದ ಅಧಿಕಾರಿಗಳು ಮತ್ತು ಶ್ವೇತಭವನದ ಹಿರಿಯ ಸಲಹೆಗಾರ ಜ್ಯಾರೆಡ್ ಕಶ್ನರ್ ನಡುವೆ ನಡೆದ ಮಾತುಕತೆಯ ವೇಳೆ ಈ ಒಪ್ಪಂದಕ್ಕೆ ಬರಲಾಗಿದೆ.

ಕಶ್ನರ್ ಮತ್ತು ಅಮೆರಿಕದ ಮಧ್ಯಪ್ರಾಚ್ಯ ರಾಯಭಾರಿಗಳಾದ ಆ್ಯವಿ ಬರ್ಕೋವಿಟ್ಝ್ ಮತ್ತು ಬ್ರಯಾನ್ ಹುಕ್ ಸೌದಿ ಅರೇಬಿಯಕ್ಕೆ ನೀಡಿದ ಭೇಟಿಯ ವೇಳೆ ಈ ಒಪ್ಪಂದಕ್ಕೆ ಬರಲಾಗಿದೆ. ‘‘ಈ ವಿಷಯವನ್ನು ಇತ್ಯರ್ಥಪಡಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ’’ ಎಂದು ಅಧಿಕಾರಿಯು ‘ರಾಯ್ಟರ್ಸ್’ ಸುದ್ದಿಸಂಸ್ಥೆಗೆ ತಿಳಿಸಿದರು.

ಇಸ್ರೇಲ್‌ನ ಮೊದಲ ವಾಣಿಜ್ಯ ವಿಮಾನ ಮಂಗಳವಾರ ಬೆಳಗ್ಗೆ ಯುಎಇಗೆ ಹಾರಿದ್ದು, ಗಂಟೆಗಳ ಮುನ್ನ ತನ್ನ ವಾಯುಪ್ರದೇಶವನ್ನು ದಾಟಲು ಸೌದಿ ಅರೇಬಿಯ ಅಂಗೀಕಾರ ನೀಡಿದೆ. ಇದಕ್ಕೂ ಮೊದಲು, ಸೌದಿ ಅರೇಬಿಯದ ಅಂಗೀಕಾರ ಲಭಿಸದೆ ಇಸ್ರೇಲ್‌ನ ಮೊದಲ ವಾಣಿಜ್ಯ ವಿಮಾನವು ರದ್ದಾಗುವ ಸಾಧ್ಯತೆಯನ್ನು ಎದುರಿಸುತ್ತಿತ್ತು.

ತಿಂಗಳುಗಳ ಹಿಂದೆ ಇಸ್ರೇಲ್ ಮತ್ತು ಯುಎಇ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದು, ತಮ್ಮ ನಡುವಿನ ಸಂಬಂಧವನ್ನು ಸಾಮಾನ್ಯ ಸ್ಥಿತಿಗೆ ತರಲು ನಿರ್ಧರಿಸಿವೆ. ಈ ಒಪ್ಪಂದಕ್ಕೆ ಅನುಗುಣವಾಗಿ ಉಭಯ ದೇಶಗಳ ನಡುವೆ ವಾಣಿಜ್ಯ ವಿಮಾನ ಹಾರಾಟ ಏರ್ಪಟ್ಟಿದೆ.

ಬಹರೈನ್ ಮತಗ್ತು ಸುಡಾನ್ ದೇಶಗಳೂ ಇಸ್ರೇಲ್‌ನೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ.

ಈ ವಾರ ಕಶ್ನರ್ ಮತ್ತು ಅವರ ತಂಡ ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರನ್ನು ಭೇಟಿಯಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News