26/11 ಮುಂಬೈ ದಾಳಿ ಪ್ರಕರಣ: 12 ವರ್ಷದ ಬಳಿಕ ಪರಿಹಾರ ಪಾವತಿಸಿದ ಗುಜರಾತ್ ಸರಕಾರ

Update: 2020-12-01 17:25 GMT

ಗಾಂಧೀನಗರ, ಡಿ.1: 2008ರ ನವೆಂಬರ್ 26ರಂದು ಮುಂಬೈಯಲ್ಲಿ ನಡೆದ ಭಯೋತ್ಪಾದಕರ ದಾಳಿ ಪ್ರಕರಣದಲ್ಲಿ ಪಾಕಿಸ್ತಾನ ಮೂಲದ ಉಗ್ರರಿಂದ ಹತರಾಗಿರುವುದಾಗಿ ಗ್ರಹಿಸಲಾಗಿರುವ ಮೂರು ಮೀನುಗಾರರ ಕುಟುಂಬದವರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಗುಜರಾತ್ ಸರಕಾರದ ಮೂಲಗಳು ಹೇಳಿವೆ.

ಇದೇ ಪ್ರಕರಣದಲ್ಲಿ ಮೃತಪಟ್ಟಿದ್ದಾರೆಂದು ಭಾವಿಸಲಾಗಿರುವ ಇತರ ಇಬ್ಬರು ಮೀನುಗಾರರ ಕುಟುಂಬದವರಿಗೆ ಈಗಾಗಲೇ ಪರಿಹಾರ ಒದಗಿಸಲಾಗಿದೆ. ಐವರು ಮೀನುಗಾರರಿದ್ದ ‘ಕುಬೇರ್’ ಎಂಬ ಟ್ರಾಲರ್ ಬೋಟ್, ಭಯೋತ್ಪಾದಕ ದಾಳಿಗಿಂತ ನಾಲ್ಕು ದಿನ ಮೊದಲು ಮೀನುಗಾರಿಕೆಗೆ ತೆರಳಿತ್ತು. ಅಮರ್‌ಸಿನ್ಹ ಸೋಳಂಕಿ, ರಮೇಶ್ ಬಂಭಾನಿಯಾ, ನಾತು ರಾಥೋಡ್, ಮುಕೇಶ್ ರಾಥೋಡ್ ಹಾಗೂ ಬಲವಂತ್ ತಾಂದೇಲ್ ಬೋಟಿನಲ್ಲಿದ್ದರು. ಸಮುದ್ರದ ಮಧ್ಯೆ ಈ ಬೋಟನ್ನು ಕೈವಶ ಮಾಡಿಕೊಂಡಿದ್ದ ಉಗ್ರರು, ಮೀನುಗಾರರನ್ನು ಮಾರ್ಗದರ್ಶಿಗಳನ್ನಾಗಿ ಮಾಡಿಕೊಂಡು ಮುಂಬೈ ತಲುಪಿದ್ದರು ಎನ್ನಲಾಗಿದೆ. ದಾಳಿಯ ಬಳಿಕ ನಡೆದ ಶೋಧ ಕಾರ್ಯಾಚರಣೆ ಸಂದರ್ಭ ಮುಂಬೈ ಕಡಲತೀರದಲ್ಲಿ ಕುಬೇರ ಬೋಟು ಮತ್ತು ಅದರೊಳಗೆ ಸೋಳಂಕಿಯ ಮೃತದೇಹ ಪತ್ತೆಯಾಗಿತ್ತು. ಉಳಿದ ಮೀನುಗಾರ ಮೃತದೇಹ ಪತ್ತೆಯಾಗಲೇ ಇಲ್ಲ.

ಈ ನಾಲ್ಕೂ ಮೀನುಗಾರರು ಮೃತಪಟ್ಟಿದ್ದಾರೆ ಎಂದು 2017ರ ಫೆಬ್ರವರಿಯಲ್ಲಿ ಗುಜರಾತ್‌ನ ನವಸಾರಿ ಜಿಲ್ಲಾ ಸಿವಿಲ್ ಕೋರ್ಟ್ ಘೋಷಿಸಿತ್ತು. ಸೋಳಂಕಿಯ ಮೃತದೇಹ ಮುಂಬೈ ಬಳಿ ದೊರಕಿದ್ದರಿಂದ ಮಹಾರಾಷ್ಟ್ರ ಸರಕಾರ ಆತನ ಕುಟುಂಬದವರಿಗೆ 5 ಲಕ್ಷ ರೂ. ಪರಿಹಾರ ಧನ ನೀಡಿದ್ದರು. ರಮೇಶ್ ಬಂಭಾನಿಯಾ ಕುಟುಂಬದವರಿಗೆ 2019ರಲ್ಲಿ ಗುಜರಾತ್ ಸರಕಾರ 5 ಲಕ್ಷ ರೂ. ಪರಿಹಾರ ಧನ ನೀಡಿತ್ತು.

ಇದೀಗ ಕಳೆದ ಶುಕ್ರವಾರ ಉಳಿದ ಮೂವರು ಮೀನುಗಾರರ ಕುಟುಂಬದವರಿಗೆ ತಲಾ 5 ಲಕ್ಷ ರೂ. ಪರಿಹಾರಧನವನ್ನು ಫಿಕ್ಸೆಡ್ ಡಿಪಾಸಿಟ್ ರೂಪದಲ್ಲಿ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News