ಗುಟೆರಸ್, ಬೈಡನ್ ಮಾತುಕತೆ: ಕೊರೋನ, ಹವಾಮಾನ ಬದಲಾವಣೆಯಲ್ಲಿ ಪ್ರಬಲ ಭಾಗೀದಾರಿಕೆಗೆ ಪಣ
ನ್ಯೂಯಾರ್ಕ್, ಡಿ. 1: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಸೋಮವಾರ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಜೊತೆ ಮಾತುಕತೆ ನಡೆಸಿದ್ದು, ಕೋವಿಡ್-19 ಸಾಂಕ್ರಾಮಿಕ ಮತ್ತು ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವುದಕ್ಕಾಗಿ ‘ಪ್ರಬಲ ಭಾಗೀದಾರಿಕೆ’ಯೊಂದನ್ನು ನಿರ್ಮಿಸುವ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.
ಈ ಎರಡು ವಿಷಯಗಳಲ್ಲಿ ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೇಜವಾಬ್ದಾರಿಯ ಧೋರಣೆಗಳನ್ನು ತಳೆದಿದ್ದಾರೆ. ಹವಾಮಾನ ಬದಲಾವಣೆ ಎನ್ನುವುದು ‘ಸುಳ್ಳು’ ಎಂದಿರುವ ಟ್ರಂಪ್, 2017ರಲ್ಲಿ ವಿಶ್ವಸಂಸ್ಥೆಯ ಜಾಗತಿಕ ಪರಿಸರ ಒಪ್ಪಂದದಿಂದ ಅಮೆರಿಕವನ್ನು ಹೊರತಂದಿದ್ದಾರೆ.
2015ರಲ್ಲಿ ಪ್ಯಾರಿಸ್‌ನಲ್ಲಿ ಸಹಿ ಹಾಕಲಾಗಿರುವ ವಿಶ್ವಸಂಸ್ಥೆಯ ಪರಿಸರ ಒಪ್ಪಂದಕ್ಕೆ ಮರು ಸೇರ್ಪಡೆಯಾಗುವುದಾಗಿ ಜೋ ಬೈಡನ್ ಘೋಷಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ನೀಡುವ ಅನುದಾನವನ್ನು ಸ್ಥಗಿತಗೊಳಿಸಿರುವ ಟ್ರಂಪ್, ಈ ಜಾಗತಿಕ ಆರೋಗ್ಯ ವೇದಿಕೆಯಿಂದಲೂ ಅಮೆರಿಕವನ್ನು ಹೊರತಂದಿದ್ದರು. ಈ ನಿರ್ಧಾರವು ಮುಂದಿನ ವರ್ಷದ ಜುಲೈನಲ್ಲಿ ಅನುಷ್ಠಾನಕ್ಕೆ ಬರಲಿತ್ತು.
ಆದರೆ, ಟ್ರಂಪ್‌ರ ಈ ನಿರ್ಧಾರವನ್ನು ರದ್ದುಪಡಿಸುವುದಾಗಿ ನಿಯೋಜಿತ ಅಧ್ಯಕ್ಷ ಬೈಡನ್ ಘೋಷಿಸಿದ್ದಾರೆ.