ವಿಶೇಷ ಶಿಕ್ಷಕರ ಅಳಲು ಕೇಳಲು ಸರಕಾರ ಮುಂದಾಗಲಿ : ಫಾ. ಮ್ಯಾಥ್ಯೂ

Update: 2020-12-02 08:49 GMT

ಮಂಗಳೂರು, ಡಿ. 2: ವಿಶೇಷ ಮಕ್ಕಳ ಸೇವೆ ಎಂದರೆ ದೇವರ ಸೇವೆ ಮಾಡಿದಂತೆ. ಅಂತಹ ಸೇವೆ ನೀಡುತ್ತಿರುವ ಶಿಕ್ಷಕರಿಗೆ ಸರಕಾರ ಸರಿಯಾದ ಸವಲತ್ತು, ವೇತನ ನೀಡಬೇಕು. ವಿಶೇಷ ಶಿಕ್ಷಕರ ಅಳಲು ಆಲಿಸಲು ಸರಕಾರ ಮುಂದಾಗಬೇಕು ಎಂದು ಕಿನ್ನಿಗೋಳಿ ಚರ್ಚ್‌ನ ಪ್ರಧಾನ ಧರ್ಮಗುರು ಫಾ. ಮ್ಯಾಥ್ಯೂ ವಾಸ್ ಒತ್ತಾಯಿಸಿದರು.

ಶಿಶು ಕೇಂದ್ರೀಕೃತ ಶಿಕ್ಷಣ ಸಹಾಯಧನ ಯೋಜನೆಯಲ್ಲಿ ಅನುದಾನ ಪಡೆಯುತ್ತಿರುವ ರಾಜ್ಯದ ವಿಶೇಷ ಶಾಲೆಗಳಲ್ಲಿ ಸೇವಾ ನಿರತರಾಗಿರುವ ವಿಶೇಷ ಶಿಕ್ಷಕರು ಮತ್ತು ಸಿಬಂದಿಗೆ ಗೌರವಧನ ದ್ವಿಗುಣಗೊಳಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘದ ವತಿಯಿಂದ ನಗರದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಡೆದ ವಿಶೇಷ ಶಿಕ್ಷಕರ ಮುಷ್ಕರವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ವಿದ್ಯೆ ನೀಡುವ ಶಿಕ್ಷಕರು ಮುಷ್ಕರ ಹೂಡುವಂತಹ ಪರಿಸ್ಥಿತಿ ಬರಬಾರದು. ವಿಶೇಷ ಮಕ್ಕಳಿಗೆ ಕಲಿಸುವುದೆಂದರೆ ಕೇವಲ ವಿದ್ಯೆ ಮಾತ್ರವಲ್ಲ, ಅವರ ಎಲ್ಲಾ ಕೆಲಸಗಳನ್ನೂ ಶಿಕ್ಷಕರೇ ಮಾಡಬೇಕಾಗುತ್ತದೆ. ಆದರೆ ಸರಕಾರ ಅವರಿಗೆ ನೀಡುವ ಸಣ್ಣ ಮೊತ್ತದ ಗೌರವಧನದಿಂದ ಜೀವನ ನಡೆಸುವುದು ಕಷ್ಟ ಎಂದರು.

ಸಂಘದ ರಾಜ್ಯ ಗೌರವ ಕಾರ್ಯದರ್ಶಿ ಡಾ. ವಸಂತ್‌ಕುಮಾರ್ ಶೆಟ್ಟಿ ಮಾತನಾಡಿ, 2010-11ರಲ್ಲಿ ಜಾರಿಗೆ ಬಂದ ಶಿಶು ಕೇಂದ್ರೀಕೃತ ಸಹಾಯಧನ ಯೋಜನೆಯಲ್ಲಿ ಸುಮಾರು 141 ಸಂಸ್ಥೆಗಳು ಅನುದಾನ ಪಡೆಯುತ್ತಿದ್ದು, ಈ ಸಂಸ್ಥೆಗಳಲ್ಲಿ ಸೇವಾ ನಿರತವಾಗಿರುವ ವಿಶೇಷ ಶಿಕ್ಷಕರು ಹಾಗೂ ಸಿಬಂದಿಗೆ ಕೇಂದ್ರ ಸರಕಾರ ಘೋಷಿಸಿರುವ ಕನಿಷ್ಠ ವೇತನ ಕೂಡಾ ದೊರಕಿಲ್ಲ. ಇದರಿಂದ ಅವರಿಗೆ ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದರು.

ವಿಶೇಷ ಶಿಕ್ಷಕರಿಗೆ 2013-14ರಿಂದ ಇಲ್ಲಿವರೆಗೆ ಕೇವಲ 13500 ರೂ. ಗೌರವಧನ ಹಾಗೂ ಇತರ ಸಿಬಂದಿಗೆ 8-9 ಸಾವಿರ ರೂ. ಸಿಗುತ್ತಿದೆ. ಏರಿಕೆ ಮಾಡುವಂತೆ ನಿರಂತರವಾಗಿ ಕೇಳುತ್ತಲೇ ಬಂದಿದ್ದರೂ ಯಾರೂ ಈ ಬಗ್ಗೆ ಗಮನ ಹರಿಸಿಲ್ಲ. ವಿಶೇಷ ಶಿಕ್ಷಕರ ಅಳಲನ್ನು ಆಲಿಸಿ ಸರಕಾರ ತತ್‌ಕ್ಷಣ ಗೌರವಧನವನ್ನು ದ್ವಿಗುಣಗೊಳಿಸಬೇಕು. ಇಲಾಖೆಯಿಂದ ಸಕಾರಾತ್ಮಕ ಆದೇಶ ಜಾರಿಯಾಗದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದವರು ತಿಳಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ರೇಷ್ಮಾ ಮಾರ್ಟಿಸ್ ಸ್ವಾಗತಿಸಿದರು. ಮುಷ್ಕರಕ್ಕೂ ಮುನ್ನ ಹಂಪನಕಟ್ಟೆ ಬಳಿಯಿಂದ ಮಿನಿ ವಿಧಾನಸೌಧದವರೆಗೆ ವಿಶೇಷ ಶಿಕ್ಷಕರ ಜಾಥಾ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News