ಯುವತಿಗೆ ಶ್ವಾಸಕೋಶದ ಸಮಸ್ಯೆ: ಪುತ್ತೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್‌ನಲ್ಲಿ ಸಾಗಿದ ಅಂಬ್ಯುಲೆನ್ಸ್

Update: 2020-12-02 16:30 GMT

ಪುತ್ತೂರು: ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿಯನ್ನು ಚಿಕಿತ್ಸೆಗಾಗಿ ’ಝೀರೊ ಟ್ರಾಫಿಕ್‌‘ ಮೂಲಕ ಅಂಬ್ಯುಲೆನ್ಸ್ ‌ನಲ್ಲಿ ಪುತ್ತೂರಿನಿಂದ ಬೆಂಗಳೂರಿನ ಆಸ್ಪತ್ರೆಗೆ ತಲುಪಿಸಿದ ಚಾಲಕ ಹನೀಫ್ ಅವರ ಕಾರ್ಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಶ್ವಾಸಕೋಶದ ಶಸ್ತ್ರಚಿಕಿತ್ಸೆಗೆ ತುರ್ತಾಗಿ ಒಳಗಾಗಬೇಕಿದ್ದ ಸುಹಾನ (22) ಎಂಬ ಯುವತಿಯನ್ನು ಹನೀಫ್‌, ಪುತ್ತೂರಿನ ಮಹಾವೀರ ಆಸ್ಪತ್ರೆಯಿಂದ ಉಪ್ಪಿನಂಗಡಿ– ಗುರುವಾಯನಕೆರೆ– ಉಜಿರೆ– ಚಾರ್ಮಾಡಿ ಘಾಟಿ ಮೂಲಕ ಒಂದೂವರೆ ಗಂಟೆಯಲ್ಲಿ ಮೂಡಿಗೆರೆ ಹ್ಯಾಂಡ್ ಪೋಸ್ಟ್ ತಲುಪಿಸಿ, ಅಲ್ಲಿಂದ ಬೇಲೂರು ಮೂಲಕ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ವೈದೇಹಿ ಆಸ್ಪತ್ರೆ ತಲುಪಿಸಿದ್ದಾರೆ.

ಅಂಬ್ಯುಲೆನ್ಸ್ ಸಾಗುವ ಮಾರ್ಗದಲ್ಲಿ ಸಾರ್ವಜನಿಕರು, ಸ್ಥಳೀಯರು, ಸಂಘ ಸಂಸ್ಥೆಗಳು ಪೊಲೀಸರಿಗೆ ಸಹಕಾರ ನೀಡಿ ’ಝೀರೊ ಟ್ರಾಫಿಕ್‌‘ ವ್ಯವಸ್ಥೆ ಮಾಡಿದ್ದರು. ಈ ಮಾನವೀಯತೆಯ ಕಾರ್ಯಕ್ಕೆ ಎಲ್ಲಡೆಯಿಂದ ಶ್ಲಾಘನೆ ವ್ಯಕ್ತವಾಯಿತು.

‘ಯಾವುದೇ ವ್ಯಕ್ತಿಯ ಪ್ರಾಣ ಬಹಳ ಮುಖ್ಯ. ಅದನ್ನು ಉಳಿಸುವುದೇ ಮಾನವೀಯತೆ. ಸಾರ್ವಜನಿಕರ, ಸ್ನೇಹಿತರ ಸಹಕಾರದಿಂದ ಅತಿ ಕಡಿಮೆ ಅವದಿಯಲ್ಲಿ ರೋಗಿಯನ್ನು ಬೆಂಗಳೂರು ಆಸ್ಪತ್ರೆಗೆ ಸೇರಿಸಲು ಸಾಧ್ಯವಾಯಿತು‘ ಎಂದು ಅಂಬುಲೆನ್ಸ್ ಚಾಲಕ ಹನೀಫ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News