ಮಣಿಪಾಲ : ವಿಶೇಷ ಶಾಲಾ ಶಿಕ್ಷಕರ, ಶಿಕ್ಷಕೇತರ ಸಿಬ್ಬಂದಿಗಳಿಂದ ಮುಷ್ಕರ

Update: 2020-12-02 13:32 GMT

ಮಣಿಪಾಲ, ಡಿ.2: ರಾಜ್ಯದ ವಿಶೇಷ ಶಾಲೆಗಳ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಗೌರವಧನವನ್ನು ದ್ವಿಗುಣಗೊಳಿಸುವುದೂ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರು ಹಾಗೂ ಶಿಕ್ಷಕೇತರರ ಸಂಘದ ಉಡುಪಿ ಜಿಲ್ಲಾ ಘಟಕದ ವತಿಯಿಂದ ಇಂದು ಒಂದು ದಿನದ ಸಾಂಕೇತಿಕ ಮುಷ್ಕರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯಿತು.

ಮುಷ್ಕರವನ್ನು ಉದ್ಘಾಟಿಸಿದ ಬಡಗುಬೆಟ್ಟು ಕೋ ಆಪರೇಟಿವ್ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ವಿಶೇಷ ಶಿಕ್ಷಕರು ಉತ್ತಮ ಬದುಕು ಮುನ್ನಡೆಸಲು ಸೂಕ್ತವಾದ ಗೌರವಧನ ಹಾಗೂ ಸೇವಾಭದ್ರತೆಯನ್ನು ನೀಡಬೇಕು. ಅವರಿಗೆ ಕನಿಷ್ಠವೇತನ ನೀಡದೇ ಕಡಿಮೆ ಮೊತ್ತದ ಗೌರವಧನ ನೀಡುವ ಮೂಲಕ ಮಲತಾಯಿ ಧೋರಣೆ ಸರಿಯಲ್ಲ. ಮುಂದಿನ ಬಜೆಟ್‌ನಲ್ಲಾದರೂ ಅವರಿಗೆ ದುಪ್ಪಟ್ಟು ವೇತನ ನೀಡಬೇಕು ಎಂದರು.

ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಸಂಘ ಅಧ್ಯಕ್ಷೆ ಡಾ. ಕಾಂತಿ ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, 1982ರ ಅನುದಾನ ನೀತಿ ಸಂಹಿತೆಯಂತೆ ರಾಜ್ಯದ ಕೇವಲ 32 ಸಂಸ್ಥೆಗಳಿಗೆ ಮಾತ್ರ ಶಿಕ್ಷಣ ಇಲಾಖೆಯ ಅನುದಾನಿತ ಶಾಲಾ ಶಿಕ್ಷಕರಿಗೆ ದೊರೆಯುವ ರೀತಿಯ ಅನುದಾನ ಸಂಬಳ ಸಿಗುತ್ತಿದೆ. ಬೇರೆ ಯಾವುದೇ ಸಂಸ್ಥೆಗಳಿಗೆ ಸರಕಾರದಿಂದ ಯಾವುದೇ ರೀತಿಯ ಪ್ರೋತ್ಸಾಹ, ಆರ್ಥಿಕ ಬೆಂಬಲ ಸಿಗುತ್ತಿಲ್ಲ. ಈ ಬಗ್ಗೆ ನಮ್ಮ ಸಂಘದ ಮೂಲಕ ರಾಜ್ಯ, ಜಿಲ್ಲಾ ಮಟ್ಟದಲ್ಲಿ ಧರಣಿ, ಮುಷ್ಕರಗಳನ್ನು ನಡೆಸಿ ಮನವಿ ಅರ್ಪಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

2013-14ನೇ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿಶೇಷ ಶಿಕ್ಷಕರ ಗೌರವಧನವನ್ನು 13,500ರೂ.ಗೆ. ಹಾಗೂ ಇತರ ಸಿಬ್ಬಂದಿಗಳ ವೇತನವನ್ನು 8ರಿಂದ 90,00ರೂ.ಗೆ ಏರಿಸಿದ ಬಳಿಕ ಇದುವರೆಗೆ ಗೌರವಧನದಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ ಎಂದು ಡಾ.ಕಾಂತಿ ಹರೀಶ್ ವಿವರಿಸಿದರು.

ಪ್ರಸ್ತುತ ‘ಶಿಶು ಕೇಂದ್ರಿತ ಸಹಾಯಧನ ಯೋಜನೆ’ಯ ಅಡಿಯಲ್ಲಿ ಸುಮಾರು 141 ವಿಶೇಷ ಶಾಲೆಗಳು ರಾಜ್ಯ ಸರಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಅನುದಾನವನ್ನು ಪಡೆಯುತಿದ್ದು, ಈ ಸಂಸ್ಥೆಗಳಲ್ಲಿ ಸೇವಾನಿರತರಾಗಿರುವ ವಿಶೇಷ ಶಿಕ್ಷಕರು ಹಾಗೂ ಇತರೆ ಸಿಬ್ಬಂದಿಗಳಿಗೆ ಕೇಂದ್ರ ಸರಕಾರ ನಿಗದಿ ಪಡಿಸಿದ ಕನಿಷ್ಠ ವೇತನವನ್ನು ನೀಡಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ನೀಡಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಡಿ.3ರ ವಿಕಲಚೇತನರ ದಿನಾಚರಣೆ ಬಹಿಷ್ಕಾರ: ಇದೇ ನವೆಂಬರ್ ತಿಂಗಳ ಅಂತ್ಯದೊಳಗೆ ರಾಜ್ಯದ ವಿಶೇಷ ಶಾಲೆಗಳಲ್ಲಿ ಸೇವಾನಿರತರಾಗಿ ರುವ ವಿಶೇಷ ಶಿಕ್ಷಕರ ಹಾಗೂ ಶಿಕ್ಷತೇತರ ಸಿಬ್ಬಂದಿಗಳ ಗೌರವಧನವನ್ನು ದ್ವಿಗುಣಗೊಳಿಸಲು ಕ್ರಮಕೈಗೊಳ್ಳುವುದಾಗಿ ಕಳೆದ ವಿಶ್ವ ವಿಕಲಚೇತ ನರ ದಿನಾಚರಣೆ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಇನ್ನೂ ಸಹ ಈಡೇರಿಸದ ಹಿನ್ನೆಲೆಯಲ್ಲಿ ನಾಳೆ ಡಿ.3ರಂದು ನಡೆಯುವ ವಿಶ್ವ ವಿಕಲ ಚೇತನರ ದಿನಾಚರಣೆಯನ್ನು ರಾಜ್ಯಾದ್ಯಂತ ಬಹಿಷ್ಕರಿಸಲು ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರರ ಸಂಘ ಮತ್ತು ಕರ್ನಾಟಕ ರಾಜ್ಯ ವಿಕಲಚೇತನರ ಸೇವಾಸಂಸ್ಥೆಗಳ ಒಕ್ಕೂಟದ ಕರೆಯಂತೆ ನಿರ್ಧರಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸರಕಾರದಿಂದ, ಇಲಾಖೆಯಿಂದ ನಮ್ಮ ಮನವಿಗೆ ಸಕಾರಾತ್ಮಕ ಪ್ರತಿಕ್ರಿಯೆ ಬಾರದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರಮಟ್ಟದ ಹೋರಾಟವನ್ನು ರಾಜ್ಯ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಂದು ಮನವಿ ತಿಳಿಸಿದೆ.

ಮುಷ್ಕರ ನಡೆಯುವ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಜಿ ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ವಿಕಲಚೇತನರ ಸಬಲೀಕರಣ ಅಧಿಕಾರಿ ರತ್ನಾ ಅವರ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಮುಷ್ಕರಕ್ಕೆ ಬೆಂಬಲವಾಗಿ ಕಾರ್ಮಿಕರ ವೇದಿಕೆಯ ರಾಜ್ಯಾಧ್ಯಕ್ಷ ರವಿ ಶೆಟ್ಟಿ ಬೈಂದೂರು, ಮಣಿಪಾಲದ ಆಸರೆ ಸಂಸ್ಥೆಯ ಅಧ್ಯಕ್ಷ ಜೈವಿಠ್ಠಲ್, ಸಮಾಜಸೇವಕಿ ಸಾಧನಾ ಕಿಣಿ, ಮಾನಸ ಸಂಸ್ಥೆಯ ಅಧ್ಯಕ್ಷ ಹೆನ್ರಿ ಡಿಸೋಜ, ಆಶಾ ನಿಲಯ ಸಂಸ್ಥೆಯ ಕಾರ್ಯದರ್ಶಿ ಸ್ಟೀಫನ್ ಕರ್ಕಡ, ಕಾರುಣ್ಯ ವಿಶೇಷ ಶಾಲಾ ವಿಶ್ವಸ್ಥ ದೇವಪುತ್ರ ಕುಂದರ್ ಅಗಮಿಸಿದ್ದರು.

ಪ್ರತಿಭಟನೆಯಲ್ಲಿ ಶಿಕ್ಷಕರ ಸಂಘದ ಗೌರವಾಧ್ಯಕ್ಷೆ ಆಗ್ನೇಸ್ ಕುಂದರ್, ಉಪಾಧ್ಯಕ್ಷೆ ಪ್ರೇಮ, ಕಾರ್ಯದರ್ಶಿ ಜಯವಿಜಯ, ಕೋಶಾಧಿಕಾರಿ ಪ್ರಮೀಳಾ, ಸೈಮನ್ ಡಿಸೋಜ, ಪ್ರಭಾಕರ ಅಮ್ಮಣ್ಣ, ರವೀಂದ್ರ ಹಾಗೂ ಜಿಲ್ಲೆಯ ಸುಮಾರು 14 ವಿಶೇಷ ಶಾಲೆಗಳ ಶಿಕ್ಷಕಿಯರು, ಪಾಲಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News