ಮಣಿಪಾಲ ಕೆಎಂಸಿಯಲ್ಲಿ ಇಎಸ್‌ಐ ಚಿಕಿತ್ಸೆ ಸ್ಥಗಿತ : ಸೌಲಭ್ಯ ಪುನರಾರಂಭಕ್ಕೆ ಒತ್ತಾಯಿಸಿ ಡಿ.8ಕ್ಕೆ ಮಾಸ್ ಇಂಡಿಯಾ ಧರಣಿ

Update: 2020-12-02 14:14 GMT

ಉಡುಪಿ, ಡಿ.2: ಇಎಸ್‌ಐಸಿ ಪ್ರಾಧಿಕಾರವು ಕಳೆದ ಹಲವಾರು ತಿಂಗಳುಗಳಿಂದ 10ರಿಂದ 15 ಕೋಟಿ ರೂ. ಬಾಕಿ ಹಣವನ್ನು ಪಾವತಿಸದೇ ಇರುವುದರಿಂದ ಕಳೆದ ನವೆಂಬರ್ 1ರಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಯು ಇಎಸ್‌ಐ ಚಿಕಿತ್ಸಾ ಸೌಲಭ್ಯವನ್ನು ತನ್ನ ಕೊಡುಗೆದಾರರಿಗೆ ಹಾಗೂ ಅವರ ಫಲಾನುಭವಿಗಳಿಗೆ ನಿಲ್ಲಿಸಿದೆ ಎಂದು ಮಾಸ್ ಇಂಡಿಯಾ ಎನ್‌ಜಿಓ ಕರ್ನಾಟಕ ಘಟಕದ ಅಧ್ಯಕ್ಷ ಗೋಪಾಲ ಕೋಟೆಯಾರ್ ತಿಳಿಸಿದ್ದಾರೆ.

ಮಂಗಳವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡ ಕೋಟೆಯಾರ್, ಕೆಎಂಸಿಯು ಎಲ್ಲಾ ರೀತಿಯ ಸೌಲಭ್ಯ ಗಳನ್ನು ಹೊಂದಿರುವ ಆಸ್ಪತ್ರೆಯಾಗಿದ್ದು, ಇಲ್ಲಿ ನವೆಂಬರ್‌ನಲ್ಲಿ ನಡೆಯಬೇಕಿದ್ದ ಐಎಸ್‌ಐನೊಂದಿಗಿನ ಒಪ್ಪಂದವನ್ನು ನವೀಕರಣ ಮಾಡಿಲ್ಲ. ಇದರಿಂದ ಜಿಲ್ಲೆಯ ಹಾಗೂ ಹೊರಜಿಲ್ಲೆಗಳ ಕಾರ್ಮಿಕ ವಿಮಾ ಯೋಜನೆಯ ಫಲಾನುಭವಿ ಕಾರ್ಮಿಕರಿಗೆ ತೀವ್ರ ತೊಂದರೆಯಾಗಿದೆ ಎಂದರು.

ಈ ಬಗ್ಗೆ ಮಾಸ್ ಇಂಡಿಯಾ ಕರ್ನಾಟಕ ಘಟಕದ ಮಾಹಿತಿ ಸೇವಾ ಸಮಿತಿಯು, ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ, ಆರೋಗ್ಯ ಮಂತ್ರಿ, ಕೇಂದ್ರದ ಕಾರ್ಮಿಕ ಸಚಿವ, ಇಎಸ್‌ಐಸಿಯ ಹೊಸದಿಲ್ಲಿ ನಿರ್ದೇಶಕ, ಬೆಂಗಳೂರಿನ ಪ್ರಾದೇಶಿಕ ನಿರ್ದೇಶಕ, ಇಎಸ್‌ಐಎಸ್ ನಿರ್ದೇಶಕ, ಉಡುಪಿಯ ಸಂಸದೆ, ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದಿದ್ದರೂ ಯಾರೊಬ್ಬರಿಂದಲೂ ಯಾವುದೇ ಪ್ರತಿಕ್ರಿಯೆಯಾಗಲೇ, ಯಾವುದೇ ಕ್ರಮವಾಗಿ ಸರಕಾರದ ವತಿಯಿಂದ ಕೈಗೊಂಡಿಲ್ಲ ಎಂದರು.

ಇದೀಗ ಮಾಸ್ ಇಂಡಿಯಾ ಎನ್‌ಜಿಓ ಕರ್ನಾಟಕ ಘಟಕವು ಕೆಎಂಸಿ ಮಣಿಪಾಲದಲ್ಲಿ ಇಎಸ್‌ಐ ಚಿಕಿತ್ಸಾ ಸೌಲಭ್ಯವನ್ನು ಪುನರಾರಂಭಿಸುವ ಒತ್ತಾಯಿಸಿ ಇದೇ ಡಿ.8ರ ಮಂಗಳವಾರ ಬೆಳಗ್ಗೆ 8:30ರಿಂದ ಮಣಿಪಾಲದಲ್ಲಿ ರುವ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಯನ್ನು ಆಯೋಜಿ ಸಿದೆ. ತಾನು ಇದರಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಕೋಟೆಯಾರ್ ತಿಳಿಸಿದರು.

ಕಾರ್ಮಿಕರಿಂದ 54 ಕೋಟಿ ರೂ.ದೇಣಿಗೆ: ಉಡುಪಿ ಜಿಲ್ಲೆಯಲ್ಲಿ ಸುಮಾರು 75ಸಾವಿರ ಕಾರ್ಮಿಕರು ಇಎಸ್‌ಐ ವಿಮಾ ಯೋಜನೆಯ ಸದಸ್ಯ ರಾಗಿದ್ದು, ಇವರು ಪ್ರತಿವರ್ಷ 54.72ಕೋಟಿ ರೂ.ದೇಣಿಗೆಯನ್ನು ನೀಡುತಿದ್ದಾರೆ. ಆದರೆ ಇದರಿಂದ ಕಾರ್ಮಿಕರಿಗಾಗಿ ಪ್ರತಿವರ್ಷ ಮಾಡುವ ಖರ್ಚು ಶೇ.10ರಿಂದ 20ನ್ನು ಮೀರುವುದಿಲ್ಲ ಎಂದವರು ವಿವರಿಸಿದರು.

ಕಾರ್ಮಿಕರ ಕುಟುಂಬ ವರ್ಗವೂ ಸೇರಿ ಒಟ್ಟು ಸುಮಾರು 5ಲಕ್ಷ ಜನರಿಗೆ ಇಎಸ್‌ಐ ಸೌಲಭ್ಯ ದೊರೆಯಬೇಕಾಗಿತ್ತು. ಆದರೆ ಸರಕಾರದ ನಿರ್ಲಕ್ಷದಿಂದ ಇದು ದೊರೆಯುತ್ತಿಲ್ಲ. ಜಿಲ್ಲೆಯಲ್ಲಿ ಎಲ್ಲಾ ಸೌಲಭ್ಯಗಳಿರುವ ಆಸ್ಪತ್ರೆ ಕೆಎಂಸಿ ಒಂದೇ ಆಗಿದ್ದು, ಇಲ್ಲೂ ಇದೀಗ ಇಎಸ್‌ಐ ಪಲಾನು ಭವಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಲಾಗುತ್ತಿದೆ. ಹಣವನ್ನು ಕಟ್ಟಿ ಮುಂದೆ ಸರಕಾರದಿಂದ ಅದನ್ನು ಭರಿಸಿಕೊಳ್ಳುವಂತೆ ಹೇಳಲಾಗುತ್ತಿದೆ ಎಂದವರು ದೂರಿದರು.

ಇಎಸ್‌ಐ ಯೋಜನೆಯಲ್ಲಿ ಉಡುಪಿ, ಕುಂದಾಪುರ, ಮಣಿಪಾಲ ಹಾಗೂ ಕಾರ್ಕಳದಲ್ಲಿ ಕೇವಲ ಔಷಧಾಲಯಗಳಿದ್ದು, ಅಲ್ಲಿ ಯಾವುದೇ ಸೌಲಭ್ಯ ಗಳು ಸಿಗುವುದಿಲ್ಲ. ಅಲ್ಲದೇ ಅಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆಯೂ ಇದ್ದು, ಕಾರ್ಮಿಕರಿಗೆ ಸೂಕ್ತ ಔಷಧಿ ಹಾಗೂ ಚಿಕಿತ್ಸೆ ದೊರೆಯು ತ್ತಿಲ್ಲ. ಅದೇ ರೀತಿ ಇಎಸ್‌ಐ ಒಪ್ಪಂದಕ್ಕೊಳಪಟ್ಟ ಆಸ್ಪತ್ರೆಗಳಲ್ಲಿ ಬಡ, ಅವಿದ್ಯಾವಂತ ಕಾರ್ಮಿಕರಿಗೆ ಅವಧಿ ಮೀರಿದ ಔಷಧಿ, ಕಳಪೆ ಗುಣಮಟ್ಟ ಔಷಧಿಗಳನ್ನು ನೀಡಿ ವಂಚಿಸಲಾಗುತ್ತಿದೆ ಎಂದವರು ಆರೋಪಿಸಿದರು.

ಆದುದರಿಂದ ಮಣಿಪಾಲದ ಕೆಎಂಸಿಯಲ್ಲಿ ಈಗ ಸ್ಥಗಿತಗೊಂಡಿರುವ ಇಎಸ್‌ಐ ಸೌಲಭ್ಯ ಹಾಗೂ ಚಿಕಿತ್ಸೆಯನ್ನು ಕೂಡಲೇ ಪುನರಾಂಭಿಸುವಂತೆ ಒತ್ತಾಯಿಸಿ ಮಾಹಿತಿ ಸೇವಾ ಸಮಿತಿಯು ಜಿಲ್ಲೆಯ ಸಮಸ್ತ ಕಾರ್ಮಿಕರೊಂದಿಗೆ ಸೇರಿ ಡಿ.8ರಂದು ಮುಷ್ಕರ ನಡೆಲಿದೆ ಎಂದು ಕೋಟೆಯಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಸ್ ಇಂಡಿಯಾದ ಯುವ ಅಧ್ಯಕ್ಷ ಪ್ರವೀಣ್ ಕುಮಾರ್, ಬ್ರಹ್ಮಾವರ ತಾಲೂಕು ಅಧ್ಯಕ್ಷ ಸ್ಟೀಫನ್ ರಾಜೇಶ್ ಪಿರೇರಾ, ಶಿರ್ವ ಅಧ್ಯಕ್ಷ ಪ್ರವೀಣ್ ನೆಲ್ಸನ್ ಶಿರ್ವ ಉಪಸ್ಥಿತರಿದ್ದರು.

ಬಡ ಕಾರ್ಮಿಕರ ವಿಮಾ ಯೋಜನೆಗೆ ಕತ್ತರಿ, ಆದರೆ...
ವೈದ್ಯಕೀಯ ವೆಚ್ಚ ಮರುಪಾವತಿ ಪಡೆದ 37 ಶಾಸಕರು

ಬಡ ಕಾರ್ಮಿಕರು ತಾವೇ ಸಂಬಳದಲ್ಲಿ ಪಾವತಿಸುವ ಕಾರ್ಮಿಕ ವಿಮಾ ಯೋಜನೆಯ ದೇಣಿಗೆಯನ್ನು ಪಡೆಯುವುದಕ್ಕೆ ಹರ ಸಾಹಸ ಪಡಬೇಕಾದರೂ, ನಮ್ಮ ಶಾಸಕರು ಹಾಗೂ ಸಚಿವರು ನಮ್ಮದೇ ತೆರಿಗೆ ಹಣದಲ್ಲಿ ತಾವು ಮಾಡಿದ ವೈದ್ಯಕೀಯ ವೆಚ್ಚವನ್ನು ಮರುಪಾವತಿ ಪಡೆಯಲು ಯಾವುದೇ ಮಜುಗುರ ತೋರಿಸುವುದಿಲ್ಲ ಎಂದು ಗೋಪಾಲ ಎ.ಕೋಟೆಯಾರ್ ತಿಳಿಸಿದರು.

ಮಾಹಿತಿ ಹಕ್ಕಿನ ಅಧಿನಿಯಮದ ಅಡಿಯಲ್ಲಿ ತಾವು 2019ರ ಎ.1ರಿಂದ 2020ರ ಮಾ.31ರವರೆಗಿನ ಅವಧಿಯಲ್ಲಿ ನಮ್ಮ ಶಾಸಕರು ಹಾಗೂ ಸಚಿವರು ಪಡೆದ ವೈದ್ಯಕೀಯ ವೆಚ್ಚಗಳ ಮರುಪಾವತಿ ವಿವರಗಳನ್ನು ಪಡೆದಿದ್ದು, ಒಟ್ಟು 37 ಮಂದಿ ಈ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಕನಿಷ್ಠ 5 ಕೋಟಿ ರೂ. ಗಳಿಗೂ ಅಧಿಕ ಆಸ್ತಿಯನ್ನು ಹೊಂದಿರುವ ಈ ಜನಪ್ರತಿನಿಧಿಗಳು, ಬಡ ಕಾರ್ಮಿಕರು ತಮ್ಮದೇ ಹಣದಲ್ಲಿ ಪಡೆಯುವ ಸೌಲಭ್ಯ ದೊರೆಯುವಂತೆ ಮಾಡಲು ಯಾವುದೇ ಕಾಳಜಿ ತೋರಿಸುವುದಿಲ್ಲ ಎಂದು ದೂರಿದರು.

ಹೀಗೆ ಮರುಪಾವತಿ ಪಡೆದವರಲ್ಲಿ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಗೋವಿಂದ ಎಂ.ಕಾರಜೋಳ, ಜೆ.ಸಿ. ಮಾಧುಸ್ವಾಮಿ, ಬಿ.ರಾಮುಲು, ಬಿ.ಎಂ.ಸುಕುಮಾರ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಬಿ.ಸಿ.ಪಾಟೀಲ್, ವಿ.ಮುನಿಯಪ್ಪ, ಎನ್.ಲಿಂಗಣ್ಣ, ಬಿ.ಸತ್ಯನಾರಾಯಣ, ಎನ್.ಮಹೇಶ್, ಅರಗಂ ಜ್ಞಾನೇಂದ್ರ, ಅಭಯ ಪಾಟೀಲ್, ಎಸ್.ಕುಮಾರ್ ಬಂಗಾರಪ್ಪ, ಎಚ್.ಕೆ.ಪಾಟೀಲ್, ಎಂ.ವೈ. ಪಾಟೀಲ್ ಸೇರಿ 37 ಶಾಸಕರಿದ್ದಾರೆ ಎಂದು ಕೋಟೆಯಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News