ಜೀವದ ಹಂಗು ತೊರೆದು 19 ಮೀನುಗಾರರ ರಕ್ಷಣೆ : ಸಾಹಸ ಮೆರೆದ ನಿಝಾಮುದ್ದೀನ್, ಇಜಾಝ್, ಶರಾಫತ್

Update: 2020-12-02 14:29 GMT
ನಿಝಾಮುದ್ದೀನ್

ಮಂಗಳೂರು, ಡಿ. 2: ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೋಟ್ ದುರಂತ ನಡೆದ ವೇಳೆ ಜೀವದ ಹಂಗು ತೊರೆದು 19 ಮೀನುಗಾರರ ಪ್ರಾಣವನ್ನು ಉಳಿಸುವ ಮೂಲಕ ಬೆಂಗ್ರೆಯ ನಿಝಾಮುದ್ದೀನ್, ಇಜಾಝ್, ಶರಾಫತ್ ಸಾಹಸ ಮೆರೆದಿದ್ದಾರೆ.

ಸುತ್ತಮತ್ತ ಆವರಿಸಿದ ಕಾರ್ಗತ್ತಲು. ನೀರವ ಮೌನದಲ್ಲಿ ಮುಳುಗುತ್ತಿರುವ ಮೀನುಗಾರರ ಆಕ್ರಂದನ ಕಡಲ ಅಲೆಗಳ ಹೊರತು ಯಾರಿಗೂ ಕೇಳಿಸಲೇ ಇಲ್ಲ. ಬೋಟು ಸಮುದ್ರದಲ್ಲಿ ಮುಳುಗುತ್ತಿದ್ದಂತೆ ಮೀನುಗಾರರು ಚೆಲ್ಲಾ-ಪಿಲ್ಲಿಯಾಗಿ ನೀರಿಗೆ ಬಿದ್ದರು. ಆ ಕತ್ತಲಲ್ಲೂ ಕಣ್ಣಿಗೆ ಕಂಡದ್ದು ಡಿಂಗಿಯೊಂದೇ. ಎಲ್ಲರ ಚಿತ್ತವೂ ಡಿಂಗಿಯಲ್ಲಿ ಆಶ್ರಯ ಪಡೆಯುವುದೇ ಆಗಿತ್ತು. ಆದರೆ ಬೋಟ್‌ಗೆ ಕಟ್ಟಲಾಗಿದ್ದ ಡಿಂಗಿಯ ಹಗ್ಗವನ್ನು ತುಂಡರಿಸುವ ವ್ಯವಧಾನ ಯಾರಲ್ಲೂ ಕಿಂಚಿತ್ತೂ ಇರಲೇ ಇಲ್ಲ. ಈ ವೇಳೆ ಧಾವಿಸಿದ ಬೆಂಗ್ರೆಯ ನಿಝಾಮುದ್ದೀನ್, ಇಜಾಝ್, ಶರಾಫತ್ ಡಿಂಗಿಯ 19 ಮಂದಿಯ ಪ್ರಾಣ ಉಳಿಸುವ ಮೂಲಕ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದ್ದಾರೆ.

ಸೋಮವಾರ ನಸುಕಿನ ಜಾವ 6 ಗಂಟೆಗೆ ಮಂಗೂರಿನ ಬಂದರ್‌ನಿಂದ ಪರ್ಸಿನ್ ಬೋಟ್ ಮೀನುಗಾರಿಕೆಗೆ ತೆರಳಿತು. ಬೋಟ್‌ನಲ್ಲಿ 25 ಮಂದಿ ಪ್ರಯಾಣ ಬೆಳೆಸಿದ್ದೆವು. ದಿನವಿಡೀ ಮೀನು ಬೇಟೆ ನಡೆಸಿ ಸಂಜೆ 7 ಗಂಟೆ ಸುಮಾರಿಗೆ ಎಲ್ಲ ಕೆಲಸ ಮುಗಿದಿತ್ತು. ಇನ್ನೇನು ಬಂದರ್‌ಗೆ ಹೊರಡಲು ಅನುವಾಗಿದ್ದೆವು. ಇಂಜಿನ್‌ನ ಎಕ್ಸಲೇಟರ್ ಶುರು ಮಾಡಿದ ವೇಳೆ ಬಲ ಭಾಗಕ್ಕೆ ಬೋಟು ವಾಲಿಕೊಂಡಿತು. ಎಲ್ಲರೂ ಸಮುದ್ರಕ್ಕೆ ಹಾರಿ ಕೊಂಡರು ಎಂದು ಘಟನೆಯ ಇಂಚಿಂಚೂ ಮಾಹಿತಿ ನೀಡಿದರು ಬೆಂಗ್ರೆಯ ನಿಝಾಮುದ್ದೀನ್.

ಸಮುದ್ರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಮೀನುಗಾರರು ಬೋಟ್‌ಗೆ ಹೊಂದಿಕೊಂಡಂತಿದ್ದ ಡಿಂಗಿಯಲ್ಲಿ ಎಲ್ಲರೂ ಹತ್ತಿ ಕುಳಿತರು. ಬೋಟು ಸಂಪೂರ್ಣ ವಾಲಿಕೊಂಡು ಮುಳುಗಡೆಯಾಗುತ್ತಿತ್ತು. ಡಿಂಗಿಯನ್ನು ಬೋಟ್‌ಗೆ ಹಗ್ಗದಿಂದ ಕಟ್ಟಲಾಗಿತ್ತು. ಈ ವೇಳೆ ನನ್ನ ಕಣ್ಣಿಗೆ ಚಾಕುವೊಂದು ಕಾಣಿಸಿತು. ಚಾಕುವಿನಿಂದ ಹಗ್ಗ ತುಂಡರಿಸಿದೆ. ಇದೇ ವೇಳೆ ಬೆಂಗ್ರೆಯ ಇಜಾಝ್, ಶರಾಫತ್ ಸಹಾಯದಿಂದ ಶೀಘ್ರವೇ ಹಗ್ಗ ತುಂಡರಿಸಲು ಸಾಧ್ಯವಾಯಿತು ಎನ್ನುತ್ತಾರೆ ನಿಝಾಮ್.

ದೀರ್ಘ ನಿಟ್ಟುಸಿರು ಬಿಟ್ಟು ಡಿಂಗಿಯಲ್ಲಿದ್ದ ಮೀನುಗಾರರತ್ತ ಗಮನ ಹರಿಸಿದಾಗ ಕೆಲವರು ಕಣ್ಮರೆಯಾಗಿರುವುದು ಕಂಡುಬಂತು. ಬೋಟಿನ ಕ್ಯಾಬಿನ್‌ನಲ್ಲಿ ಕೆಲವರು ಮೀನುಗಾರರು ಉಳಿದುಕೊಂಡಿದ್ದರು. ಬೋಟು ಬಲಭಾಗಕ್ಕೆ ವಾಲಿದಾಗಲೂ ಮೀನನ ಬಲೆಯೂ ಸಮುದ್ರಪಾಲಾಗಿದೆ. ಇದರ ಜೊತೆಯೂ ಕೆಲವರು ನೀರಲ್ಲಿ ನಾಪತ್ತೆಯಾಗಿದ್ದಾರೆ. ಮೃತರಲ್ಲಿ ನನ್ನ ಸ್ನೇಹಿತರೂ ಇದ್ದಾರೆ ಎಂದು ಕಣ್ಣೀರಾದರು ನಿಝಾಮ್.

ಡಿಂಗಿಯಲ್ಲಿ ನಿರುಮ್ಮಳರಾಗಿ ಕುಳಿತಿದ್ದೆವು. ಒಬ್ಬರ ಮುಖ ಮತ್ತೊಬ್ಬರು ನೋಡುತ್ತಿದ್ದೆವು. ಸುರಕ್ಷಿತವಾಗಿ ಮನೆ ಸೇರುವ ಆಸೆಯನ್ನೇ ಕೈಬಿಟ್ಟಿದ್ದೆವು. ರಾತ್ರಿ ವೇಳೆ ಸುತ್ತಲೂ ಕತ್ತಲು. ಇನ್ನು ಮುಗಿಯಿತು. ದೊಡ್ಡ ಅಲೆಯೊಂದು ಬಂದರೆ ಎಲ್ಲರೂ ಸಮುದ್ರಪಾಲು ಎಂಬುದೇ ಖಚಿತವಾಗಿತ್ತು. ಕಣ್ಣೀರ ಕೋಡಿ ಹರಿದಿತ್ತು. ಅಲೆಗಳ ಹೊಯ್ದಿಟಕ್ಕೆ ಜೀವ ಬಾಯಿಗೆ ಬಂದಂತಾಗುತ್ತಿತ್ತು. ಅರದಲ್ಲೇ ರಾತ್ರಿ ಕಳೆದೆವು ಎಂದು ಕಡಲಲ್ಲಿನ ಪರಿಸ್ಥಿತಿಯನ್ನು ಬಿಚ್ಚಿಟ್ಟರು.

ಮಂಗಳವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ‘ಚಾಮುಂಡೇಶ್ವರಿ’ ಹೆಸರಿನ ಪರ್ಸಿನ್ ಬೋಟ್ ಬಂದಿತು. ದೂರದಿಂದಲೇ ಬೋಟು ಕಾಣಿಸುತ್ತಿದ್ದಂತೆ ಬಾವುಟವೊಂದನ್ನು ತೋರಿಸಿ ಕರೆದೆವು. ಬಳಿಕ ಸಂಕಷ್ಟದಿಂದ ಪಾರಾಗಿ ಮನೆಗೆ ಬಂದೆವು. ಹಡಗಿನಲ್ಲಿ 18 ಟನ್ ಮಾತ್ರವೇ ಮೀನು ಹಾಕಿದ್ದೇವು. ಘಟನೆಗೆ ನೈಜ ಕಾರಣದ ಬಗ್ಗೆ ಗೊತ್ತಿಲ್ಲ ಎಂದು ಹೇಳಿದರು.

‘ಕ್ರೇನ್ ಬಳಸಿದ್ದರೆ ಬದುಕುತ್ತಿದ್ದರು’

ಕಡಲಿನಲ್ಲಿ ಸಂಭವಿಸಿದ ದುರಂತದಲ್ಲಿ ಹಲವು ನಾಪತ್ತೆಯಾಗಿದ್ದರು. ಐವರ ಮೃತದೇಹವೂ ಪತ್ತೆಯಾಗಿದೆ. ಅದೇ ಸಂದರ್ಭದಲ್ಲಿ ಕೋಸ್ಟ್ ಗಾರ್ಡ್‌ನಿಂದ ಕ್ರೇನ್ ಬಳಸಿ ಕಾರ್ಯಾಚರಣೆ ನಡೆಸಿದ್ದರೆ ಹಲವು ಮೀನುಗಾರರ ಜೀವ ಉಳಿಯುತ್ತಿತ್ತು ಎಂದು ದುರಂತದಲ್ಲಿ ಪಾರಾಗಿ ಬಂದ ಬೆಂಗ್ರೆಯ ನಿಝಾಮುದ್ದೀನ್ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News