ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡ ವೃದ್ಧೆಯನ್ನು ಬಿಲ್ಕಿಸ್ ಬಾನು ಎಂದ ಕಂಗನಾ

Update: 2020-12-02 15:44 GMT

ಮೊಹಾಲಿ, ಡಿ. 2: ಹೊಸದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡ ವೃದ್ಧೆಯೋರ್ವರನ್ನು ‘ಶಾಹೀನ್‌ಬಾಗ್ ದಾದಿ’ ಎಂದೇ ಜನಪ್ರಿಯರಾಗಿರುವ ಬಿಲ್ಕಿಸ್ ಬಾನು ಎಂದು ತಪ್ಪಾಗಿ ಗುರುತಿಸಿ ಟ್ವೀಟ್ ಮಾಡಿದ ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರಿಗೆ ಪಂಜಾಬ್ ಮೂಲದ ವಕೀಲರೊಬ್ಬರು ಕಾನೂನು ನೋಟಿಸ್ ರವಾನಿಸಿದ್ದಾರೆ.

ನವೆಂಬರ್ 30ರಂದು ರವಾನಿಸಲಾದ ಕಾನೂನು ನೋಟಿಸ್‌ನಲ್ಲಿ ವಕೀಲ ಹಕ್ರಮ್ ಸಿಂಗ್, ರಾಣಾವತ್ ಅವರು ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡುವಾಗ ಮಾಹಿತಿಯನ್ನು ದೃಢಪಡಿಸಿಕೊಳ್ಳಬೇಕಿತ್ತು ಎಂದಿದ್ದಾರೆ. ಅಲ್ಲದೆ, ಟ್ವೀಟ್‌ಗೆ ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ. ‘‘ಮೊಹಿಂದರ್ ಕೌರ್ ಅವರನ್ನು ಬಿಲ್ಕಿಸ್ ಬಾನು ಎಂದು ತಪ್ಪಾಗಿ ಗುರುತಿಸಿ, ಅವರು 100 ರೂಪಾಯಿಗೆ ಬಾಡಿಗೆ ಪ್ರತಿಭಟನಾಕಾರರಾಗಿ ಲಭ್ಯವಿದ್ದರು ಎಂದು ಪ್ರಚೋದನಾತ್ಮಕ ಟ್ವೀಟ್ ಮಾಡಿದ ಕಂಗನಾ ರಾಣಾವತ್‌ಗೆ ನಾನು ಕಾನೂನು ನೋಟಿಸು ರವಾನಿಸಿದ್ದೇನೆ.

ಕ್ಷಮೆ ಯಾಚಿಸಲು ಕಂಗನಾ ಅವರಿಗೆ 7 ದಿನಗಳ ಕಾಲಾವಕಾಶ ನೀಡಲಾಗಿದೆ. ಕ್ಷಮೆ ಕೋರದೇ ಇದ್ದರೆ, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು’’ ಎಂದು ಸಿಂಗ್ ಹೇಳಿದ್ದಾರೆ. ಬಿಲ್ಕಿಸ್ ಬಾನು ಅವರು ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅವರು 100 ರೂಪಾಯಿಗೆ ಲಭ್ಯ ಎಂದು ಕಂಗನಾ ರಾಣಾವತ್ ಟ್ವೀಟ್ ಮಾಡಿದ್ದಾರೆ ಎಂದು ಕಾನೂನು ನೋಟಿಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News