ಬಿಜೆಪಿಯ ಐಟಿ ವರಿಷ್ಠ ಮಾಳವೀಯ ವೀಡಿಯೊ ‘ಕೃತ್ರಿಮ’ ಎಂದ ಟ್ವಿಟ್ಟರ್

Update: 2020-12-02 16:06 GMT

ಹೊಸದಿಲ್ಲಿ, ಡಿ.2: ಬಿಜೆಪಿಯ ಮಾಹಿತಿ ತಂತ್ರಜ್ಞಾನ ಘಟಕದ ವರಿಷ್ಠ ಅಮಿತ್ ಮಾಳವೀಯ ಅವರು ಟ್ವೀಟ್ ಮಾಡಿರುವ ರೈತರ ಪ್ರತಿಭಟನೆಗಳ ವೀಡಿಯೊ ಸಂಕಲನವನ್ನು ‘ರೂಪಾಂತರಗೊಂಡ ಮಾಧ್ಯಮ’ ಎಂಬುದಾಗಿ ಟ್ವಿಟ್ಟರ್ ಟ್ಯಾಗ್ ಮಾಡಿದೆ.

ಭಾರತದ ರಾಜಕಾರಣಿಯೊಬ್ಬರ ವಿರುದ್ಧ ಟ್ವಿಟ್ಟರ್ ನಿರ್ಬಂಧನಾತ್ಮಕ ಕ್ರಮವನ್ನು ಕೈಗೊಂಡಿರುವುದು ಇದೇ ಮೊದಲ ಸಲವಾಗಿದೆ. ಬಳಕೆದಾರರು ತಪ್ಪು ಮಾಹಿತಿಯನ್ನು ಹರಡುವುದನ್ನು ನಿಯಂತ್ರಿಸಲು ಟ್ವಿಟ್ಟರ್ ಇತ್ತೀಚೆಗೆ ತನ್ನ ನೀತಿಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ.

2019ರ ನವೆಂಬರ್‌ನಲ್ಲಿ ತಿರುಚಿದ ವೀಡಿಯೊ, ಮಾಹಿತಿ ಅಥವಾ ಸುದ್ದಿಗಳನ್ನು ಹರಡುವ ವಿರುದ್ಧ ಪ್ರಾಥಮಿಕ ಹಂತದ ಕರಡು ನೀತಿಯನ್ನು ಜಾರಿಗೆ ತಂದಿತ್ತು.

ಮಾಳವೀಯ ಅವರು ಟ್ವೀಟ್ ಮಾಡಿರುವ ವೀಡಿಯೊವನ್ನು ತಿರುಚಲಾಗಿಲ್ಲವಾದರೂ, ಸತ್ಯವನ್ನು ಮರೆಮಾಚಲು ಅದನ್ನು ಸಂಕಲನ ಗೊಳಿಸಿರುವುದು ದೃಢಪಟ್ಟಿದೆ. ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಪೊಲೀಸನೋರ್ವ, ವೃದ್ಧ ರೈತರೊಬ್ಬರ ಮೇಲೆ ಲಾಠಿ ಬೀಸುವ ದೃಶ್ಯವಿರುವ ಛಾಯಾಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ತದನಂತರ ರಾಹುಲ್ ಗಾಂಧಿ ಮತ್ತಿತರ ಪ್ರತಿಪಕ್ಷ ನಾಯಕರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ದಮನಿಸಲು ಸಶಸ್ತ್ರ ಪೊಲೀಸರನ್ನು ಕಳುಹಿಸಿದ್ದಕ್ಕಾಗಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಪೊಲೀಸ್ ಬೀಸಿದ ಲಾಠಿಯು ನಿಜವಾಗಿ ರೈತನಿಗೆ ತಾಗಿಲ್ಲವೆಂಬಂತೆ ತೋರಿಸಲು ಮಾಳವೀಯ ಅವರು ಸಂಕಲನಗೊಳಿಸಿದ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಪ್ರಸಾರ ಮಾಡಿದ್ದರು. ಕೇಂದ್ರ ಸರಕಾರದ ವಿರುದ್ಧ ಅಪಪ್ರಚಾರ ಮಾಡುವ ಉದ್ದೇಶದಿಂದ ಪ್ರತಿಪಕ್ಷಗಳು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿವೆ ಎಂದವರು ಆಪಾದಿಸಿದ್ದರು.

ದಿಲ್ಲಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ ಹಲವಾರು ಘಟನೆಗಳು ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು. ರಾಜಧಾನಿಯನ್ನು ಪ್ರವೇಶಿಸುವುದನ್ನು ತಡೆಯುವುದಕ್ಕಾಗಿ ಇರಿಸಲಾಗಿದ್ದ ತಡೆಬೇಲಿಗಳನ್ನು ಮುರಿದು ಹಾಕಿದ ರೈತರ ವಿರುದ್ಧ ಪೊಲೀಸರು ಲಾಠಿಚಾರ್ಜ್, ಅಶ್ರುವಾಯು ಪ್ರಯೋಗದಂತಹ ಹಿಂಸಾತ್ಮಕ ಕಾರ್ಯಾಚರಣೆಗಳನ್ನು ನಡೆಸಿರುವುದನ್ನು ಹಲವಾರು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News