ಅಕ್ರಮ ಕಲ್ಲು ಸ್ಪೋಟಕ್ಕೆ ಜಿಲೆಟಿನ್ ಕಡ್ಡಿ ಬಳಕೆ: ಸಂಘಟನೆಗಳ ಆತಂಕ

Update: 2020-12-02 16:14 GMT

ಮಂಗಳೂರು, ಡಿ.2: ದ.ಕ. ಜಿಲ್ಲೆಯ ಹಲವು ಕಡೆಗಳಲ್ಲಿ ಅಕ್ರಮ ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿದ್ದು, ಇದರ ಸ್ಪೋಟಕ್ಕೆ ಜಿಲೆಟಿನ್ ಕಡ್ಡಿ ಬಳಸಲಾಗುತ್ತಿದೆ ಎಂದು ಸ್ಟೋನ್ ಬೋಲ್ಡರ್ಸ್‌ ಸಪ್ಲಾಯರ್ಸ್ ಅಸೋಸಿಯೇಶನ್ ಜೊತೆ ಕಾರ್ಯದರ್ಶಿ ಹೇಮಂತ್ ಕುಮಾರ್ ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲೆಟಿನ್ ಕಡ್ಡಿ ಸಾಮಾನ್ಯ ಜನರ ಕೈಗೆ ನೀಡುವಂತಿಲ್ಲ. ಆದರೂ ಅಕ್ರಮ ಗಣಿಗಾರಿಕೆಯಲ್ಲಿ ಜಿಲೆಟಿನ್‌ನಂತಹ ಸ್ಪೋಟಕಗಳನ್ನು ಬಳಕೆ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಇದು ಮುಕ್ತವಾಗಿ ಸಿಗುತ್ತಿರುವುದಕ್ಕೆ ಬಳಕೆಗೆ ಸಾಕ್ಷಿಯಾಗಿದೆ ಎಂದರು.

ಕೇರಳದಲ್ಲಿ ಗಣಿಗಾರಿಕೆಗೆ ಅವಕಾಶ ಇಲ್ಲದ ಕಾರಣ ದ.ಕ. ಜಿಲ್ಲೆಯ ಗಡಿಭಾಗದಲ್ಲಿರುವ ಮುಡಿಪು, ಮೆಲ್ಕಾರ್, ನರಹರಿ ಪರ್ವತ, ಬೋಳಿಯಾರ್ ಮತ್ತಿತರ ಕಡೆಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಈ ಬಗ್ಗೆ ದೂರು ನೀಡಿದರೆ ದಾಳಿಯ ನಾಟಕ ಮಾಡಲಾಗುತ್ತದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಹಕಾರದಿಂದ ಅಕ್ರಮ ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ನರಹರಿ ಪರ್ವತದ ಕೆಳಗಡೆಯೇ ಗಣಿಗಾರಿಕೆ ನಡೆಸುತ್ತಿರುವುದು ವಿಪರ್ಯಾಸ. ರಾಜಧನದ ಪ್ರಮಾಣಪತ್ರವಿಲ್ಲದೆ ಕಲ್ಲು ಲಾರಿಗಳು ರಸ್ತೆಗಿಳಿಯುವಂತಿಲ್ಲ ಎಂಬುದು ಕೇಂದ್ರ ಸರಕಾರದ ನಿಯಮವಾಗಿದೆ. ಆದರೂ ಅದರ ಪಾಲನೆಯಾಗುತ್ತಿಲ್ಲ. ಇವೆಲ್ಲದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡುವುದು ಅನಿವಾರ್ಯ ಎಂದು ಹೇಮಂತ್ ಕುಮಾರ್ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಅಶ್ವಿನ್ ಕುಮಾರ್, ಕೋಶಾಧಿಕಾರಿ ಗೋಕುಲ್ ದಾಸ್, ಉಪಾಧ್ಯಕ್ಷ ಅಬ್ದುಲ್ ಅಝೀಝ್ ವರ್ಕಾಡಿ, ಕಾರ್ಯದರ್ಶಿ ಗಳಾದ ಸಮೀರ್, ಶಫಿ, ರಿಯಾಝ್ ಹರೇಕಳ, ಅಬ್ದುಲ್ ರಹ್ಮಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News