ಕೃಷಿ ಕಾನೂನು ರದ್ದತಿಗಾಗಿ ಸಂಸತ್‌ನ ವಿಶೇಷ ಅಧಿವೇಶನ ಕರೆಯಲು ರೈತರ ಪಟ್ಟು

Update: 2020-12-02 16:37 GMT

 ಹೊಸದಿಲ್ಲಿ,ಡಿ.2: ದಿಲ್ಲಿಯಲ್ಲಿ ರೈತರ ಪ್ರತಿಭಟನೆ ಏಳನೇ ದಿನಕ್ಕೆ ಕಾಲಿರಿಸುವಂತೆಯೇ ನೂತನ ಕೃಷಿ ಕಾನೂನುಗಳನ್ನು ರದ್ದುಪಡಿಸಲು ಕೇಂದ್ರ ಸರಕಾರವು ಸಂಸತ್‌ನ ವಿಶೇಷ ಅಧಿವೇಶನವನ್ನು ಕರೆಯಬೇಕೆಂದು ಪ್ರತಿಭಟನಾ ನಿರತ ರೈತರು ಬುಧವಾರ ಆಗ್ರಹಿಸಿದ್ದಾರೆ. ತಮ್ಮ ಬೇಡಿಕೆಗಳು ಈಡೇರದೆ ಇದ್ದಲ್ಲಿ ಹೊಸದಿಲ್ಲಿಯ ಇತರ ರಸ್ತೆಗಳಿಗೂ ದಿಗ್ಬಂಧನ ವಿಧಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

 ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೈತ ನಾಯಕ ದರ್ಶನ್ ಪಾಲ್ ಅವರು ಕೇಂದ್ರ ಸರಕಾರವು ರೈತ ಸಂಘಟನೆಗಳನ್ನು ವಿಭಜಿಸಲು ಯತ್ನಿಸುತ್ತಿದೆ, ಆದರೆ ಅದು ಅಸಾಧ್ಯವೆಂದು ಹೇಳಿದ್ದಾರೆ.

  ನೂತನ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವ ವರೆಗೆ ರೈತರು ಪ್ರತಿಭಟನೆಯನ್ನು ಮುಂದುವರಿಸಲಿದ್ದಾರೆಂದು ಅವರು ಹೇಳಿದರು. ಕೃಷಿ ಕಾನೂನುಗಳನ್ನು ಹಿಂಪಡೆಯಲು ಕೇಂದ್ರವು ಸಂಸತ್‌ನ ವಿಶೇಷ ಅಧಿವೇಶನವನ್ನು ಕರೆಯಬೇಕೆಂದು ದರ್ಶನ್ ಪಾಲ್ ಆಗ್ರಹಿಸಿದರು.

   ಇನ್ನೋರ್ವ ರೈತ ನಾಯಕ ಗುರ್ನಾಮ್ ಸಿಂಗ್ ಚಾದೋನಿ ಮಾತನಾಡಿ ಒಂದು ವೇಳೆ ಕೇಂದ್ರ ಸರಕಾರವು ನೂತನ ಕೃಷಿ ಕಾನೂನುಗಳನ್ನು ವಾಪಸ್ ಪಡೆಯದೆ ಇದ್ದಲ್ಲಿ, ತಮ್ಮ ಬೇಡಿಕೆಗಳ ಈಡೇರಿಕೆಗೆ ಇನ್ನೂ ಹೆಚ್ಚು ಹೆಜ್ಜೆಗಳನ್ನು ಇಡುವುದಾಗಿ ಹೇಳಿದರು.

  ಪತ್ರಿಕಾಗೋಷ್ಠಿಗೆ ಮುನ್ನ ಸುಮಾರು 32 ರೈತ ಸಂಘಟನೆಗಳ ನಾಯಕರು ಸಭೆ ಯೊಂದನ್ನು ನಡೆಸಿದ್ದು, ಭಾರತೀಯ ಕಿಸಾನ್ ಯೂನಿಯನ್‌ನ ನಾಯಕ ರಾಕೇಶ್ ಟಿಕಾಯತ್ ಅವರೂ ಭಾಗವಹಿಸಿದ್ದರು.ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಿರುವುದಾಗಿ ರೈತ ನಾಯಕರು ಎಚ್ಚರಿಕೆ ನೀಡಿರುವಂತೆಯೇ, ನರೇಂದ್ರ ಸಿಂಗ್ ತೋಮರ್ ಹಾಗೂ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಗುರುವಾರ ರೈತ ನಾಯಕರೊಂದಿಗೆ ಕೇಂದ್ರದ ಸಭೆ

ಈ ಮಧ್ಯೆ ರೈತ ಸಂಘಟನೆಗಳ ನಾಯಕರು ವ್ಯಕ್ತಪಡಿಸಿರುವ ಆತಂಕಗಳಿಗೆ ಸರಕಾರ ಸ್ಪಂದಿಸುವುದಾಗಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮಾರ್ ಪುನರುಚ್ಚರಿಸಿದ್ದ್ಜಾರೆ.

ಕೇಂದ್ರ ಸರಕಾರವು ಪ್ರತಿಭಟನಾ ನಿರತ ರೈತ ಪ್ರತಿನಿಧಿಗಳ ಜೊತೆ ಮಂಗಳವಾರ ನಡೆಸಿದ ಮಾತುಕತೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಗುರುವಾರ ರೈತ ಪ್ರತಿನಿಧಿಗಳ ಜೊತೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಲಿದೆ.

ಹರ್ಯಾಣ ಸಿಎಂ ನಿವಾಸಕ್ಕೆ ಘೇರಾವ್

 ದಿಲ್ಲಿ ಚಲೋ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ರೈತರ ಮ್ಞೇಲೆ ಬಲಪ್ರಯೋಗ ನಡೆಸಿದ್ದಕ್ಕಾಗಿ ಹರ್ಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿ ಚಂಡೀಗಢದಲ್ಲಿರುವ ಅವರ ನಿವಾಸಕ್ಕೆ ಪಂಜಾಬ್ ಯುವ ಕಾಂಗ್ರೆಸ್ ಕಾರ್ಯಕರ್ತರು ಘೇರಾವ್ ಮಾಡಿದ್ದಾರೆ. ಪ್ರತಿಭಟನಾ ನಿರತರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು ಹಾಗೂ ಹಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News