ಗುರುಪುರ ಗುಡ್ಡಕುಸಿತ ವ್ಯಾಪ್ತಿಯಲ್ಲೇ ಸಂತ್ರಸ್ತರಿಗೆ ನಿವೇಶನಕ್ಕೆ ವಿರೋಧ: ಸ್ಥಳೀಯರಿಂದ ತಹಶೀಲ್ದಾರ್‌ಗೆ ಮನವಿ

Update: 2020-12-02 16:46 GMT

ಮಂಗಳೂರು, ಡಿ. 2: ಗುರುಪುರ ಗ್ರಾಪಂ ವ್ಯಾಪ್ತಿಯ ಮೂಳೂರು ಗ್ರಾಮದ ಮಠದಗುಡ್ಡೆ ಸೈಟ್‌ನಲ್ಲಿ ಕಳೆದ ಜು. 5ರಂದು ಸಂಭವಿಸಿದ ಗುಡ್ಡಕುಸಿತದಿಂದ ನಿರ್ವಸಿತರಾದ 70 ಕುಟುಂಬಸ್ಥರಿಗೆ ಸಮೀಪದಲ್ಲೇ ನಿವೇಶನ ನೀಡಲು ಸಿದ್ಧತೆ ನಡೆಯುತ್ತಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿ ಸ್ಥಳೀಯರು ಬುಧವಾರ ಗುರುಪುರ ನಾಡಕಚೇರಿಯ ಉಪತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಗಂಜಿಮಠ ಗ್ರಾಮದ ನಾರ್ಲಪದವಿನಲ್ಲಿ ಗುರುತಿಸಲಾದ 1.5 ಎಕರೆ ಜಮೀನಿನದ ಬದಲಿಗೆ ಗುಡ್ಡಕುಸಿತಗೊಂಡ ಪ್ರದೇಶಕ್ಕೆ ಹೊಂದಿ ಕೊಂಡಿ ರುವ ಗುಡ್ಡದಲ್ಲಿರುವ ಮತ್ತೊಂದು ಅಪಾಯಕಾರಿ ಹಾಗೂ ಇಳಿಜಾರಾದ ಖಾಸಗಿ ಜಾಗ ಖರೀದಿಸಿ ಹಂಚಲು ಗ್ರಾಪಂ ಮಟ್ಟದ ಅಧಿಕಾರಿ ಗಳು ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದುಕೊಂಡ ಸ್ಥಳೀಯ ಪ್ರಮುಖರು ದೂರು ನೀಡಿದ್ದಾರೆ.

ಸುರತ್ಕಲ್ ಎನ್‌ಐಟಿಕೆ ಸಂಸ್ಥೆಯ ತಜ್ಞರ ತಂಡವೊಂದು ಇತ್ತೀಚೆಗೆ ಸರ್ವೆ ನಂಬ್ರ 133ರಲ್ಲಿರುವ ಮಠದಗುಡ್ಡೆ ಸೈಟ್‌ಗೆ ಭೇಟಿ ನೀಡಿ ಗುಡ್ಡದ ವಸ್ತುಸ್ಥಿತಿ ಅಧ್ಯಯನ ನಡೆಸಿ, ಭೌಗೋಳಿಕ ಹಿನ್ನೆಲೆ ಹಾಗೂ ಮಳೆಗಾಲದ ಸನ್ನಿವೇಶಗಳಿಗುಣವಾಗಿ ಮಠದಗುಡ್ಡೆಯು ವಾಸ್ತವ್ಯಕ್ಕೆ ಯೋಗ್ಯ ವಾಗಿಲ್ಲ ಮತ್ತು ಇದು ಸಂಪೂರ್ಣ ಅಪಾಯಕಾರಿ ವಲಯ ಎಂದು ಜಿಲ್ಲಾಧಿಕಾರಿಯವರಿಗೆ ವರದಿ ನೀಡಿತ್ತು.

ಈ ಮಧ್ಯೆ ಘಟನಾ ಸ್ಥಳಕಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಗಂಜಿಮಠದಲ್ಲಿ ಗುರುತಿಸಲಾಗಿರುವ ಎರಡು ಸರಕಾರಿ ನಿವೇಶನಗಳಲ್ಲಿ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. ಈ ಬಗ್ಗೆ ತಹಶೀಲ್ದಾರ್ ಮಟ್ಟದಲ್ಲಿ ಪ್ರಕ್ರಿಯೆ ಆರಂಭ ಗೊಂಡಿದ್ದರೂ ಕೂಡ ಎನ್‌ಐಟಿಕೆಯಿಂದ ರೆಡ್ ರೆನ್ ಹಾಗೂ ಯೆಲ್ಲೋ ರೆನ್ (ಕೆಂಪು ವಲಯ ಹಾಗೂ ಹಳದಿ ವಲಯ) ಎಂದು ಗುರುತಿಸಲಾದ ಮಠದಗುಡ್ಡೆ ಸೈಟಿಗೆ (ಸರ್ವೆ ನಂಬ್ರ 133) ಹೊಂದಿಕೊಂಡಿರುವ ಅಪಾಯಕಾರಿ ಇಳಿಜಾರು ಗುಡ್ಡದಲ್ಲಿರುವ ಖಾಸಗಿ ಜಾಗ (3.08 ಎಕರೆ) ಖರೀಸಲು ಸ್ಥಳೀಯವಾಗಿ ಅಧಿಕಾರಿ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಮನವಿ ಸಲ್ಲಿಸಿದ ನಿಯೋಗದಲ್ಲಿ ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ತಾಪಂ ಸದಸ್ಯ ಸಚಿನ್ ಅಡಪ, ಗುರುಪುರ ಗ್ರಾಪಂ ಮಾಜಿ ಉಪಾಧ್ಯಕ್ಷ ಜಿಎಂ ಉದಯ ಭಟ್ ಮತ್ತಿತರರಿದ್ದರು.

ಬಾಡಿಗೆ ಬಂದಿಲ್ಲ: ಗುಡ್ಡಕುಸಿತ ಸಂಭವಿಸಿದ ಬಳಿಕ 70 ಕುಟುಂಬಗಳಿಗೆ ಪರಿಹಾರ ಮೊತ್ತವಾಗಿ ತಲಾ 10,000 ರೂ. ಲಭಿಸಿದೆ. ಆದರೆ ಪ್ರಸಕ್ತ ಬಾಡಿಗೆ ಮನೆಯಲ್ಲಿರುವ ಸಂತ್ರಸ್ತರಿಗೆ ಇನ್ನೂ ಬಾಡಿಗೆ (ತಲಾ 2,500 ರೂ) ಬಂದಿಲ್ಲ. ಬಟ್ಟೆಬರೆ, ಪಾತ್ರೆ-ಪರಡಿಗಳ ನಷ್ಟಕ್ಕೆ ಪರಿಹಾರ ಎಂದು ಉಲ್ಲೇಖಿಸಿ ಹಂಚಿಕೆಯಾಗಿರುವ ಮೊತ್ತವನ್ನೇ (ತಲಾ 10,000 ರೂ) ಬಾಡಿಗೆ ಮೊತ್ತ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದು ನ್ಯಾಯವಲ್ಲ. ಎಡಪದವಿನಲ್ಲಿರುವ ಬಾಡಿಗೆ ಮನೆಯು ಕಮರ್ಶಿಯಲ್ ಕಟ್ಟಡವಾಗಿರುವುದರಿಂದ ತಿಂಗಳಿಗೆ 1,800 ರೂ. ವಿದ್ಯುತ್ ಬಿಲ್ ಬರುತ್ತಿದೆ. ಒಂದೆಡೆ ಕೆಲಸವಿಲ್ಲ. ಇನ್ನೊಂದೆಡೆ ಬಾಡಿಗೆ ಮೊತ್ತ ಬಂದಿಲ್ಲ. ಕಳೆದ ಆರು ತಿಂಗಳಿಂದ ಮನೆಯೂ ಇಲ್ಲ. ನಿವೇಶನವೂ ಇಲ್ಲ ಎಂದು ಎಡಪದವಿನ ಬಾಡಿಗೆ ನಿವಾಸಿ ಲತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News