ಇರಾನ್, ಇರಾಕ್ ಮಾದರಿಯಲ್ಲಿ ಭಯೋತ್ಪಾದಕ ಗೋಡೆ ಬರಹ: ಗೃಹ ಸಚಿವ ಬೊಮ್ಮಾಯಿ

Update: 2020-12-03 06:31 GMT

ಮಂಗಳೂರು, ಡಿ.3: ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳು ಕಾಶ್ಮೀರ, ಇರಾನ್, ಇರಾಕ್‌ಗಳಲ್ಲಿ ಬರೆಯುವಂತಹ ಗೋಡೆ ಬರಹ ಮಂಗಳೂರಿನಲ್ಲಿಯೂ ಬರೆಯುವ ಪ್ರಯತ್ನ ನಡೆದಿದ್ದು, ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ನಗರದ ಪಣಂಬೂರಿನಲ್ಲಿ ಪೊಲೀಸ್ ಸಿಬ್ಬಂದಿಗಾಗಿ ನಿರ್ಮಿಸಲಾಗಿರುವ 112 ಮನೆಗಳ ಸಂಕೀರ್ಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಗೋಡೆ ಬರಹ ಪ್ರಕರಣದಲ್ಲಿ ಸಾಕಷ್ಟು ಪ್ರಗತಿಯಾಗಿದ್ದು, ಈ ರೀತಿಯ ಪ್ರಕರಣ ಮರುಕಳಿಸದಂತೆ ಕ್ರಮ ವಹಿಸಲಾಗಿದೆ. ಡಿಸಿಪಿ ರೇಂಜ್ ಅಧಿಕಾರಿಗಳನ್ನು ನೈಟ್ ಬೀಟ್ ಗೆ ಹಾಕಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅವರು ಹೇಳಿದರು.

ನಗರದ ನಿಗದಿತ ಪ್ರದೇಶಗಳಲ್ಲಿ (ಡಾರ್ಕ್ ಸ್ಪಾಟ್)ಲೈಟಿಂಗ್ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರು ನಗರದಲ್ಲಿ 1,500 ಸಿಸಿಟಿವಿ ಕ್ಯಾಮೆರಾ ಪಡೆದುಕೊಳ್ಳಲು ತೀರ್ಮಾನ ಮಾಡಲಾಗಿದೆ. ಇದೇ ವೇಳೆ ಕರಾವಳಿ ಕಾವಲು ಪಡೆಯನ್ನು ಬಲಪಡಿಸಲು ನಿರ್ಧರಿಸಲಾಗಿದ್ದು, ಪೊಲೀಸರಿಗೆ ಸ್ಪೀಡ್ ಬೋಟ್‌ಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಡಾ.ಭರತ್ ಶೆಟ್ಟಿ, ರಘುಪತಿ ಭಟ್, ಸ್ಥಳೀಯ ಕಾರ್ಪೊರೇಟರ್ ಸುಮಿತ್ರಾ ಕರಿಯ ಉಪಸ್ಥಿತರಿದ್ದರು.

ಇದೇ ಸಂದರ್ಭ ಸಾಂಕೇತಿಕವಾಗಿ ಕೆಲ ಸಿಬ್ಬಂದಿಗೆ ಸಚಿವ ಬಸವರಾಜ ಬೊಮ್ಮಾಯಿ ಅವರು ಮನೆಗಳ ಕೀಗಳನ್ನು ಹಸ್ತಾಂತರಿಸಿದರು.

ಡಿಸಿಪಿ ವಿನಯ್ ಗಾಂವ್ಕರ್ ಸ್ವಾಗತಿಸಿದರು. ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಸಿಪಿ ಹರಿರಾಂ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News