2025ರೊಳಗೆ ಪೊಲೀಸರಿಗೆ 11000 ಮನೆಗಳ ನಿರ್ಮಾಣ: ಗೃಹಸಚಿವ ಬೊಮ್ಮಾಯಿ

Update: 2020-12-03 07:03 GMT

ಮಂಗಳೂರು, ಡಿ.3: ರಾಜ್ಯದಲ್ಲಿ ಮುಂದಿನ ಐದು ವರ್ಷಗಳಲ್ಲಿ (2025)ರೊಳಗೆ ಪೊಲೀಸ್ ಸಿಬ್ಬಂದಿಗಾಗಿ 11,000 ಮನೆಗಳ ನಿರ್ಮಾಣದ ಗುರಿಯನ್ನು ರಾಜ್ಯ ಸರಕಾರ ಹೊಂದಿದ್ದು, ಇದಕ್ಕಾಗಿ ಬಜೆಟ್‌ನಲ್ಲಿ ಮಂಜೂರಾತಿ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದ ಪಣಂಬೂರಿನಲ್ಲಿ ಪೊಲೀಸ್ ಸಿಬ್ಬಂದಿಗಾಗಿ ನಿರ್ಮಿಸಲಾಗಿರುವ 112 ಮನೆಗಳ ಸಂಕೀರ್ಣವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಶೇ.60ರಷ್ಟು ಪೊಲೀಸ್ ಸಿಬ್ಬಂದಿಗೆ ಮನೆ ಸೌಕರ್ಯ ದೊರೆಯಲಿದೆ. ಜನವರಿಯಿಂದ ಈ ಕಾರ್ಯ ಆರಂಭವಾಗಲಿದೆ ಎಂದರು. ದ.ಕ. ಜಿಲ್ಲೆಯಲ್ಲಿ 192 ಗೃಹ ನಿರ್ಮಾಣದ ಬೇಡಿಕೆ ಬಂದಿದ್ದು, ನಿವೇಶನ ಲಭ್ಯ ಇರುವ 74 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡುವ ಕುರಿತು ಜಿಲ್ಲಾಧಿಕಾರಿ ಕಚೇರಿಯಿಂದ ವರದಿ ಬಂದಿದೆ. ಇದನ್ನು 100ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದರು.

ಉಳಿದ ಮನೆಗಳ ನಿರ್ಮಾಣಕ್ಕೆ ನಿವೇಶನ ಗೊತ್ತುಪಡಿಸಿದ ಬಳಿಕ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಪಡಿಸುವುದರೊಂದಿಗೆ ಪೊಲೀಸ್ ಸಿಬ್ಬಂದಿಯ ಮಕ್ಕಳ ಉನ್ನತ ಶಿಕ್ಷಣಕ್ಕೆ ಅಗತ್ಯ ನೆರವು ನೀಡುವ ಚಿಂತನೆ ತನ್ನದಾಗಿದೆ ಎಂದವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News