ಗೋಡೆ ಬರಹ ಪ್ರಕರಣದ ಆರೋಪಿಯ ಬಂಧನದ ಬಗ್ಗೆ ಮಾಹಿತಿ ಇಲ್ಲ: ಗೃಹ ಸಚಿವ ಬೊಮ್ಮಾಯಿ

Update: 2020-12-03 14:27 GMT

ಉಡುಪಿ : ಮಂಗಳೂರಿನಲ್ಲಿ ಕಂಡುಬಂದ ಉಗ್ರರ ಪರ ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿ ಯಾರನ್ನೂ ಇದುವರೆಗೆ ಬಂಧಿಸಿರುವ ಬಗ್ಗೆ ಮಾಹಿತಿ ಇಲ್ಲ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತನಿಖೆಯ ಪ್ರಕ್ರಿಯೆ ನಡೆಯುತ್ತಿರುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇಂದು ಬೆಳಗ್ಗೆ ಮಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಆರೋಪಿಗಳ ಶೀಘ್ರ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಚ್ಛಿದ್ರಕಾರಿ ಶಕ್ತಿಗಳು ಈ ರೀತಿ ಬರೆಯುತ್ತವೆ. ಯುರೋಪ್, ಇರಾಕ್, ಸೌದಿ ಅರೇಬಿಯಾ ದೇಶಗಳಲ್ಲಿ ಈ ರೀತಿಯ ಬರಹಗಳು ಕಂಡುಬರುತ್ತವೆ. ನಕ್ಸಲೈಟ್‌ಗಳು ಪಾಂಪ್ಲೇಟ್‌ಗಳನ್ನು ಬಳಸುವ ಹಾಗೆ ಇವರು ಗೋಡೆ ಬರಹ ಬರೆಯುತ್ತಾರೆ. ಮಂಗಳೂರು ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸುತಿದ್ದಾರೆ. ಇಂದು ಅಥವಾ ನಾಳೆ ಆರೋಪಿಗಳನ್ನು ಬಂಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಕೃತ್ಯದ ಹಿಂದೆ ಯಾವ ಸಂಘಟನೆ ಇದೆ ಅನ್ನೊಂದನ್ನು ಪತ್ತೆ ಮಾಡುತ್ತೇವೆ. ಬರೆದ ವ್ಯಕ್ತಿ ಮಾತ್ರವಲ್ಲ ಹಿಂದಿರುವ ಶಕ್ತಿ ಯಾವುದು ಅಂತ ಪತ್ತೆ ಮಾಡುತ್ತೇವೆ ಎಂದರು.

ಮಂಗಳೂರು ಒಂದು ಸೂಕ್ಷ ಪ್ರದೇಶವಾಗಿದ್ದು, ಇಲ್ಲಿ ರಾತ್ರಿ ರೌಂಡ್ಸ್ ಹೆಚ್ಚು ಮಾಡಲು ಸೂಚಿಸಿದ್ದೇನೆ. ಡಿಸಿಪಿಗಳೂ ನೈಟ್ ರೌಂಡ್ಸ್ ಮಾಡುವಂತೆ ಕಮಿಷನರ್‌ಗೆ ಸೂಚನೆ ನೀಡಿದ್ದೇನೆ. ಗುರುತಿಸಿದ ಡಾರ್ಕ್ ಸ್ಪಾಟ್‌ಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಡೆಸುವಂತೆ ಹೇಳಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದರು.

ಮಂಗಳೂರು ನಗರದಲ್ಲಿ ಸಿಸಿ ಕೆಮರಾ ಹಾಳಾಗಿರುವ ವಿಚಾರ ಗಮನಕ್ಕೆ ಬಂದಿದೆ. ಹೊಸ ಸಿಸಿ ಕೆಮರಾ ಅಳವಡಿಕೆಗೆ ಕ್ರಮಕೈಗೊಳ್ಳುವುದಾಗಿ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News