ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು: ಸಚಿವ ಬಸರಾಜ ಬೊಮ್ಮಾಯಿ

Update: 2020-12-03 08:45 GMT

ಮಂಗಳೂರು, ಡಿ.3: ವರದಕ್ಷಿಣೆ ಪೀಡನೆ ಪ್ರಕರಣಗಳು ಹಿಂದೆಯೂ ಇತ್ತು. ಆದರೆ ವರದಕ್ಷಿಣೆ ಹಿಂಸೆ ಪ್ರಕರಣಗಳು ಹೆಚ್ಚಿದಂತೆ ಕಠಿಣ ಕಾನೂನು ರಚಿಸಲಾಯಿತು. ಅದೇ ರೀತಿ ಇದೀಗ ಲವ್ ಜಿಹಾದ್ ಸಾಮಾಜಿಕ ಪಿಡುಗಾಗಿ ಕಾಡುತ್ತಿದ್ದು, ಇಂತಹ ಪ್ರಕರಣದಲ್ಲೂ ಕಾನೂನು ರಚನೆ ಮಾಡುವ ನಿಟ್ಟಿನಲ್ಲಿ ಸರಕಾರ ಸ್ಪಷ್ಟವಾಗಿದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ವ್ಯಕ್ತಿ ಸ್ವಾತಂತ್ರದ ಹೆಸರಿನಲ್ಲಿ ಸುಲಭವಾಗಿ ಮತಾಂತರ ಪ್ರಕ್ರಿಯೆ ನಡೆಯುತ್ತಿದೆ. ಕೆಲವು ವರ್ಷಗಳಿಂದ ಲವ್‌ಜಿಹಾದ್ ಅತಿರೇಕವಾಗುತ್ತಿದ್ದು, ಆತಂಕ ಮೂಡಿಸುತ್ತಿದೆ. ಇದೀಗ ಕೋರ್ಟ್ ಕೂಡಾ ಮತಾಂತರ ಬಗ್ಗೆ ವ್ಯಾಖ್ಯೆ ಮಾಡಿದೆ. ಇದು ಸಮಾಜದ ಸ್ವಾಸ್ಥ, ಶಾಂತಿ, ಸಂಸ್ಕೃತಿಗೆ ದಕ್ಕೆಯಾಗಿದ್ದು, ಇಂತಹ ಕೃತ್ಯಕ್ಕೆ ಕಠಿಣ ಕಾನೂನು ಮೂಲಕ ಕಡಿವಾಣ ಹಾಕಬೇಕಾಗಿದೆ. ಈ ಕಾನೂನು ಸಂವಿಧಾನದ ಚೌಕಟ್ಟಿನಲ್ಲೇ ರಚನೆಯಾಗಲಿದೆ ಎಂದರು.

ಲವ್ ಜಿಹಾದ್ ಸಂಬಂಧಿಸಿ ಉತ್ತರ ಪ್ರದೇಶದಲ್ಲಿ ಕಾನೂನು, ಹರ್ಯಾಣದಲ್ಲಿ ವಿಶೇಷ ಸಮಿತಿ, ಮಧ್ಯ ಪ್ರವೇಶದಲ್ಲೂ ಕಠಿಣ ಕಾನೂನು ಚಿಂತನೆಯಿದೆ. ಆ ರಾಜ್ಯಗಳ ಜತೆ ಮಾಹಿತಿ ಪಡೆದು ರಾಜ್ಯದಲ್ಲಿ ಅತೀ ಶೀಘ್ರದಲ್ಲೇ ಲವ್ ಜಿಹಾದ್ ಸಮಗ್ರ ಕಾನೂನು ತರಲಾಗುವುದು ಎಂದವರು ಹೇಳಿದರು.

ನಗರದಲ್ಲಿ ಕಂಡು ಬಂದ ಉಗ್ರ ಬರಹವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಘಟನೆ ಮರುಕಳಿಸದಂತೆ ಡಿಸಿಪಿಗಳ ನೇತೃತ್ವದಲ್ಲೇ ರಾತ್ರಿ ಗಸ್ತು ಹೆಚ್ಚಿಸಲು ಸೂಚನೆ ನೀಡಲಾಗಿದೆ. ಇರಾಕ್, ಇರಾನ್, ಕಾಶ್ಮೀರ ಸೇರಿದಂತೆ ಅಂತಾರಾಷ್ಟ್ರೀಯ ಭಯೋತ್ಪಾದನಾ ಪ್ರಚೋದಿಸುವ ಸಂಸ್ಥೆಗಳು ಈ ರೀತಿ ಉಗ್ರವಾದದ ಬರಹವನ್ನು ಹಾಕುತ್ತವೆ. ಅದೇ ಮಾದರಿ ಪ್ರಯತ್ನ ಮಂಗಳೂರಿನಲ್ಲಿ ನಡೆದಿದ್ದು, ಇದರ ಹಿಂದಿರುವ ಕೃತ್ಯವನ್ನು ಬಯಲಿಗೆಳೆಯಲಾಗುವುದು ಎಂದರು.

ಪ್ರಾಣಿ ಹತ್ಯೆ ನಿಷೇಧ ಮಾಡಬೇಕೆಂಬುದು ಮಹಾತ್ಮ ಗಾಂಧಿ ಚಿಂತನೆಯಾಗಿದ್ದು, 1960ರ ದಶಕದಿಂದ ಇದಕ್ಕೆ ಸಂಬಂಧಿಸಿ ಕಾನೂನುಗಳಿವೆ. ಆದರೆ ಕಾನೂನು ಕ್ರಮಕ್ಕೆ ಯಾವುದೇ ರೀತಿ ಹಲ್ಲುಗಳಿಲ್ಲದೆ, ದುರುಪಯೋಗ ಮುಂದುವರಿದಿತ್ತು. ಅದರಿಂದ ಸಣ್ಣ ಕರುವಿನಿಂದ ಎಲ್ಲವೂ ಹತ್ಯೆಯಾಗುತ್ತಿದೆ. ಕಾನೂನು ರಚನೆಗೆ ಸಂಬಂಧಿಸಿ ವೆಟರ್ನರಿ ವಿಭಾಗ ಅಧಿಕಾರಿಗಳ ಜತೆ ಮಾತನಾಡುತ್ತಿದ್ದೇವೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News