ಉರ್ವಾ ಬಳಿ ಕೊಂಕಣಿ ಭವನ ನಿರ್ಮಾಣಕ್ಕೆ ಜಾಗ ಮಂಜೂರಾತಿ: ಡಾ. ಜಗದೀಶ್ ಪೈ

Update: 2020-12-03 08:52 GMT

ಮಂಗಳೂರು, ಡಿ.3: ‘ಕೊಂಕಣಿ ಭವನ’ ನಿರ್ಮಾಣಕ್ಕೆ ಉರ್ವದ ಮುಡಾ ಕಟ್ಟಡದ ಸಮೀಪ, ಅಂಬೇಡ್ಕರ್ ಭವನದ ಹಿಂಭಾಗದಲ್ಲಿ 30 ಸೆಂಟ್ಸ್ ಸರಕಾರಿ ಸ್ಥಳಕ್ಕೆ ಸರಕಾರದ ಮಂಜೂರಾತಿ ದೊರಕಿದೆ ಎಂದು ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಡಾ.ಜಗದೀಶ್ ಪೈ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹಲವಾರು ವರ್ಷಗಳ ಸತತ ಪ್ರಯತ್ನದಿಂದ ಅಕಾಡಮಿಯ ಸ್ವಂತ ಕಟ್ಟಡ ನಿರ್ಮಾಣ ಕನಸು ನನಸಾಗುತ್ತಿದೆ. ಈಗಾಗಲೇ ಕೆಲವು ತಿಂಗಳ ಹಿಂದೆ ಭವನ ನಿರ್ಮಾಣಕ್ಕೆ 5 ಕೋಟಿ ರೂ. ಬಿಡುಗಡೆಯಾಗಿದೆ. ಮುಂದಿನ ಹಂತವಾಗಿ ಕಟ್ಟಡದ ಪ್ಲಾನ್ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗುವುದು. ಶೀಘ್ರ ಶಂಕುಸ್ಥಾಪನೆ ನೆರವೇರುವ ನಿರೀಕ್ಷೆಯಿದ್ದು, ಮೂರು ಹಂತದಲ್ಲಿ ಕಟ್ಟಡ ನಿರ್ಮಾಣವಾಗಲಿದೆ ಎಂದವರು ವಿವರಿಸಿದರು.

ಸಿಎಂ ಭೇಟಿಗೆ ನಿರ್ಧಾರ: ಕೊಂಕಣಿ ಭಾಷೆಗೆ ಸಂಬಂಧಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಕಾಡಮಿ ನಿಯೋಗದಿಂದ ಮುಖ್ಯಮಂತ್ರಿಯವರನ್ನು ಭೇಟಿಯಾಗಲು ನಿರ್ಧರಿಸಲಾಗಿದೆ. ಮುಖ್ಯವಾಗಿ ಕೊಂಕಣಿ ಮಾತೃಭಾಷಿಗರಿಗೆ 5ನೇ ತರಗತಿ ವರೆಗೆ ಕೊಂಕಣಿ ಮಾಧ್ಯಮದಲ್ಲೇ ಶಿಕ್ಷಣ ನೀಡುವುದು. 6ನೇ ತರಗತಿಯಿಂದ ಎಂಎ ವರೆಗೆ, ಬಿಎಡ್ ಎಂಎಡ್ ಸೇರಿದಂತೆ ಕೊಂಕಣಿಯನ್ನು ಭಾಷೆಯಾಗಿ ಅಧ್ಯಯನ ಮಾಡಲು ಅನುಮತಿ. ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಕೊಂಕಣಿ ಶಿಕ್ಷಕರ ನೇಮಕ ಮಾಡುವುದು. ಈ ಮೊದಲಾದ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡಲಾಗುವುದು ಎಂದು ಡಾ.ಜಗದೀಶ್ ಪೈ ತಿಳಿಸಿದರು.

ಕೊಂಕಣಿ ಅಕಾಡಮಿಯ ನೂತನ ರಿಜಿಸ್ಟ್ರಾರ್ ಆಗಿ ಆರ್.ಮನೋಹರ್ ಕಾಮತ್ ಮುಂಡ್ಕೂರು ಅವರನ್ನು ಪೂರ್ಣಕಾಲಿಕ ರಿಜಿಸ್ಟ್ರಾರ್ ಆಗಿ ಸರಕಾರ ನೇಮಕ ಮಾಡಿದೆ. ಮನೋಹರ್ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪತ್ರಾಂಕಿತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಕೋವಿಡ್-19ರ ಕಾರಣದಿಂದ ಕೊಂಕಣಿ ಅಕಾಡಮಿ ಟಿ.ವಿ. ಮಾಧ್ಯಮ, ಆ್ಯಪ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ಕಾರ್ಯಕ್ರಮ ಆಯೋಜಿಸಿತ್ತು. ಮುಂದಿನ ಭಾಗವಾಗಿ ದೇಶ-ವಿದೇಶಗಳ ಯುವ ಕವಿಗಳಿಂದ ಕವಿಗೋಷ್ಠಿ, ಕಲಾವಿದರಿಂದ ಸಂಗೀತ ಕಾರ್ಯಕ್ರಮ ಸಾಮಾಜಿಕ ಜಾಲತಾಣದ ಮೂಲಕ ಆಯೋಜಿಸಲು ಉದ್ದೇಶಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಿಜಿಸ್ಟ್ರಾರ್ ಆರ್.ಮನೋಹರ್ ಕಾಮತ್, ಸದಸ್ಯರಾದ ಸಾಣೂರು ನರಸಿಂಹ ಕಾಮತ್, ಗೋಪಿ ಭಟ್, ನವೀನ್ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News