ಕೊಡಾಜೆ: ಎರಡು ಕಾರುಗಳ ನಡುವೆ ಅಪಘಾತ; ಮಗು ಸಹಿತ ಮೂವರಿಗೆ ಗಾಯ

Update: 2020-12-03 09:22 GMT

ಬಂಟ್ವಾಳ, ಡಿ.3: ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮಗು ಸಹಿತ ಮೂವರು ಗಾಯಗೊಂಡ ಘಟನೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕೊಡಾಜೆ ಎಂಬಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ಮಾಣಿ ನಿವಾಸಿ ವ್ಯಾಗನರ್ ಕಾರಿನ ಚಾಲಕ ನಯಾಝ್ ಎಂಬವರು ಗಂಭೀರ ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಸಂಬಂಧಿಗಳಾದ ಸಫಾ ಹಾಗೂ ಚಿಕ್ಕ ಮಗುವೊಂದಕ್ಕೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಇವರು ನೇರಳಕಟ್ಟೆಯಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ಕಾರಿನಲ್ಲಿ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕೊಡಾಜೆ ಶ್ರೀರಾಮಚಂದ್ರಾಪುರ ಮಠಕ್ಕೆ ತೆರಳುವ ರಸ್ತೆಯ ಮುಂಭಾಗದಲ್ಲಿ ಮಾಣಿ ಕಡೆಯಿಂದ ಬಂದ ರಿಡ್ಝ್ ಕಾರು ಇವರು ಸಂಚರಿಸುತ್ತಿದ್ದ ವ್ಯಾಗನರ್ ಕಾರಿಗೆ ಢಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.

ಘಟನೆಯಲ್ಲಿ ವ್ಯಾಗನರ್ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ರಿಡ್ಝ್ ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದ್ದು, ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಅಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News