ರೈತರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ: ಹರೀಶ್ ಕುಮಾರ್

Update: 2020-12-03 10:23 GMT

ಮಂಗಳೂರು, ಡಿ.3: ಕೇಂದ್ರ ಸರಕಾರದ ರೈತ ವಿರೋಧಿ ಕಾಯ್ದೆಯ ವಿರುದ್ಧ ರೈತರು ನಡೆಸುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡಲಿದೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹೇಳಿದ್ದಾರೆ.

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಕೃಷಿಕರ ಬೇಡಿಕೆಗಳನ್ನು ಈಡೇರಿಸಲು ಪ್ರಥಮ ಪ್ರಧಾನಿ ನೆಹರು ನೀರಾವರಿ, ಅಣೆಕಟ್ಟುಗಳ ಸಹಿತ ಹಲವಾರು ಯೋಜನೆಗಳನ್ನು ರೂಪಿಸಿದ್ದರು. ಆದರೆ ಈಗಿನ ಪ್ರಧಾನಿ ನರೇಂದ್ರ ಮೋದಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸುವ ಬದಲು ಹೊಸ ಕಾಯ್ದೆಯ ಮೂಲಕ ರೈತರ ಅಸ್ತಿತ್ವಕ್ಕೆ ಧಕ್ಕೆ ಬರುವಂತೆ ಮಾಡುತ್ತಿದ್ದಾರೆ ಎಂದರು.

ದಿಲ್ಲಿ ಚಲೋ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಲು ಬಂದಿರುವ ರೈತರ ಮೇಲೆ ಜಲ ಫಿರಂಗಿ, ತಂತಿ ಬೇಲಿ, ರಸ್ತೆ ಅಗೆತದ ಮೂಲಕ ಹತ್ತಿಕ್ಕುವುದು ಅಮಾನವೀಯ. ರೈತರ ಮಾತು ಕೇಳದೆ ಕಾಯ್ದೆ ರೂಪಿಸಿರುವುದು ಖಂಡನೀಯ. ಇದರೊಂದಿಗೆ ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆಯೂ ಜನ ವಿರೋಧಿಯಾಗಿವೆ ಎಂದು ಹರೀಶ್ ಕುಮಾರ್ ಹೇಳಿದರು.

ಶಾಸಕ ಯು.ಟಿ.ಖಾದರ್ ಮಾತನಾಡಿ, ಕಾಯ್ದೆಯಿಂದ ಲಾಭ ಇರುತ್ತಿದ್ದರೆ ರೈತರು ರಸ್ತೆಗೆ ಬರುವ ಅಗತ್ಯ ಇರಲಿಲ್ಲ. ಸರಕಾರ ರೈತರ ಭಾವನೆಗಳನ್ನು ಅರ್ಥ ಮಾಡಿಕೊಳ್ಳದ ಕಾರಣ ಸಮಸ್ಯೆಯಾಗಿದೆ ಎಂದರಲ್ಲದೆ, ಉಡುಪಿ ಬೋಟ್ ದುರಂತದಲ್ಲಿ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಿದಂತೆ ಮಂಗಳೂರಿನಲ್ಲೂ ನಡೆದ ದುರಂತದಲ್ಲಿ ಮಡಿದವರ ಕುಟುಂಬಕ್ಕೂ ಕೊಡಬೇಕು. ತಾರತಮ್ಯ ಮಾಡದೆ ನ್ಯಾಯ ಪಾಲಿಸಬೇಕು ಎಂದು ಒತ್ತಾಯಿಸಿದರು.

* ಅರಬಿ ಶಬ್ದ ‘ಜಿಹಾದ್’ ಬೇಕೆ?
ಮತಾಂತರ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್ ಮೊದಲೇ ಜಾರಿಗೆ ತಂದಿದೆ. ಬಿಜೆಪಿಗೆ ಕಾಳಜಿ ಇದ್ದರೆ ಅದನ್ನು ಇನ್ನಷ್ಟು ಬಲಿಷ್ಠ ಮಾಡಲಿ. ಅದು ಬಿಟ್ಟು ಕರ್ನಾಟಕಕ್ಕೆ, ಕನ್ನಡಕ್ಕೆ ಸಂಬಂಧವೇ ಇಲ್ಲದೆ ಲವ್ ಜಿಹಾದ್ ಎಂಬ ಇಂಗ್ಲಿಷ್, ಅರಬಿ ಶಬ್ದಗಳ ಕಾಯ್ದೆಯ ಅಗತ್ಯವಿದೆಯೇ ಎಂದು ಶಾಸಕ ಯು.ಟಿ.ಖಾದರ್ ಪ್ರಶ್ನಿಸಿದರು.

ಭೂಸುಧಾರಣೆ, ಎಪಿಎಂಸಿ, ಶಿಕ್ಷಣ ನೀತಿಯನ್ನು ಸುಗ್ರೀವಾಜ್ಞೆ ಮೂಲಕ ಅನುಮೋದನೆ ಪಡೆದಂತೆ, ಲವ್ ಜಿಹಾದ್ ವಿರುದ್ಧವೂ ಮಾಡಬೇಕು. ಗ್ರಾಪಂ ಚುನಾವಣೆ ವೇಳೆ ಭಾವನಾತ್ಮಕವಾಗಿ ಜನರನ್ನು ಕೆರಳಿಸಲು ದುರುದ್ದೇಶದಿಂದ ಡಂಗುರ ಸಾರುವ ಅಗತ್ಯವಿಲ್ಲ. ದೇಶದಲ್ಲಿ ಗೋೀಹತ್ಯೆ ನಿಷೇಧ ಕಾಯ್ದೆ ಇಂದಿರಾ ಗಾಂಧಿ ಕಾಲದಲ್ಲಿ ಜಾರಿಗೆ ಬಂದಿದೆ. ಇವರು ಇನ್ನೂ ಘೋಷಣೆಯಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಖಾದರ್ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಶಕುಂತಳಾ ಶೆಟ್ಟಿ, ಜಿಪಂ ಸದಸ್ಯರಾದ ಕೆ.ಕೆ.ಶಾಹುಲ್ ಹಮೀದ್, ಮಮತಾ ಡಿ.ಎಸ್.ಗಟ್ಟಿ, ಕಾರ್ಪೊರೇಟರ್ ಶಶಿಧರ ಹೆಗ್ಡೆ, ನೀರಜ್‌ಪಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News