ಬೋಟ್ ದುರಂತದ ಸಮಗ್ರ ತನಿಖೆ: ಕೋಟ ಶ್ರೀನಿವಾಸ ಪೂಜಾರಿ

Update: 2020-12-03 10:26 GMT

ಮಂಗಳೂರು, ಡಿ.3: ಮಂಗಳೂರಿನಲ್ಲಿ ಸಂಭವಿಸಿದ ಬೋಟ್ ದುರಂತದ ಕುರಿತು ಮೀನುಗಾರಿಕಾ ಇಲಾಖೆಯಿಂದ ಸಮಗ್ರ ತನಿಖೆ ನಡೆಸಲು ತೀರ್ಮಾನಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಮಂಗಳೂರು ಬೋಟ್ ದುರಂತದಲ್ಲಿ ಮೃತಪಟ್ಟ ಸಂತ್ರಸ್ತ ಕುಟುಂಬಗಳಿಗೆ ತಲಾ 6 ಲಕ್ಷ ರೂ. ಪರಿಹಾರ ಮೊತ್ತದ ಮಂಜೂರಾತಿ ಪತ್ರವನ್ನು ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಹಸ್ತಾಂತರಿಸಿ ಅವರು ಮಾತನಾಡುತ್ತಿದ್ದರು.

ದುರಂತದಲ್ಲಿ ನಾಪತ್ತೆಯಾದವರ ಶೋಧ ನಡೆಸುವ ಕಾರ್ಯ ಹಾಗೂ ಪರಿಹಾರ ನೀಡುವ ವಿಚಾರದಲ್ಲಿ ಸರಕಾರವು ತತ್‌ಕ್ಷಣದಿಂದಲೇ ಸ್ಪಂದಿಸಿದೆ. ನಿಯಮದ ಪ್ರಕಾರ ಸಂತ್ರಸ್ತ ಕುಟುಂಬಕ್ಕೆ ತಲಾ 6 ಲಕ್ಷ ರೂ. ಪರಿಹಾರ ವಿತರಿಸಲಾಗುತ್ತಿದೆ. ಹೆಚ್ಚುವರಿ ಪರಿಹಾರ ನೀಡುವಂತೆ ಮೀನುಗಾರ ಪ್ರಮುಖರು ಒತ್ತಾಯಿಸಿದ್ದಾರೆ. ಅದರಂತೆ ಸಂಸದರು ಹಾಗೂ ಶಾಸಕರ ನಿಯೋಗದೊಂದಿಗೆ ವಾರದೊಳಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಹೆಚ್ಚುವರಿ ತಲಾ 4 ಲಕ್ಷ ರೂ. ಸೇರಿಸಿ ಒಟ್ಟು 10 ಲಕ್ಷ ರೂ.ಪರಿಹಾರ ಒದಗಿಸಿಕೊಡುವ ನಿಟ್ಟಿನಲ್ಲಿ ವಿಶೇಷ ಕ್ರಮ ಕೈಗೊಳ್ಳಲಾಗುವುದು ಎಂದರು.

ಮೀನುಗಾರರ ಸಮಸ್ಯೆ, ಸವಾಲುಗಳ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು. ಜತೆಗೆ, ಮೀನುಗಾರಿಕೆಗೆ ತೆರಳುವ ಕಾರ್ಮಿಕರು ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಲ್ೈ ಜಾಕೆಟ್ ಬಳಕೆ ಸೇರಿದಂತೆ ವಿವಿಧ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಬಗ್ಗೆ ಶೀಘ್ರದಲ್ಲಿ ಮೀನುಗಾರ ಮುಖಂಡರು ಹಾಗೂ ಇಲಾಖೆಯ ಜತೆಗೆ ಸಭೆ ನಡೆಸಲಾಗುವುದು ಎಂದವರು ಹೇಳಿದರು.

ದುರಂತದಲ್ಲಿ ನಾಪತ್ತೆಯಾಗಿರುವ ಮೀನುಗಾರನ ಪತ್ತೆಗೆ ಬಾರ್ಜ್ ನೆರವು
ದುರಂತ ನಡೆದಿರುವ ಸ್ಥಳದಿಂದ ಬೋಟನ್ನು ಮೇಲಕ್ಕೆತ್ತಿ ‘ಬೋಟ್ ಮೇಲಕ್ಕೆತ್ತಿ ಕಾರ್ಯಾಚರಣೆ ನಡೆಸಲು ಸೋಮೇಶ್ವರದಿಂದ ಬಾರ್ಜ್ ತರಿಸಲು ಜಿಲ್ಲಾಧಿಕಾರಿಗೆೆ ಸೂಚಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಮೀನುಗಾರಿಕಾ ಬೋಟು ದುರಂತದಲ್ಲಿ ನಾಪತ್ತೆಯಾದ ಒರ್ವನ ಪತ್ತೆಗಾಗಿ ಮುಳುಗಡೆಯಾದ ಸ್ಥಳದಲ್ಲಿ ಪರಿಶೀಲನೆ ನಡೆಸಲು ಬಾರ್ಜ್‌ನ ಸಹಾಯ ಪಡೆಯಬೇಕಾಗಿದೆ ಎಂದು ಉಪಸ್ಥಿತರಿದ್ದ ಪ್ರಮುಖರು ಅಭಿಪ್ರಾಯಿಸಿದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಮುಳುಗು ತಜ್ಞರ ಪ್ರಕಾರ ಸಮುದ್ರದ 60 ಅಡಿ ಆಳದಲ್ಲಿ ಬೋಟ್ ಇರುವ ಬಗ್ಗೆ ತಿಳಿಸಿದ್ದಾರೆ. ಹೀಗಾಗಿ ಇದನ್ನು ಮೇಲಕ್ಕೆತ್ತುವ ಬಗ್ಗೆ ಸೋಮೇಶ್ವರದಲ್ಲಿ ಎಡಿಬಿ ಕಾಮಗಾರಿ ನಡೆಸುತ್ತಿರುವ ಬಾರ್ಜ್ ಹಾಗೂ ಅದರಲ್ಲಿರುವ ಕ್ರೇನ್ ತರಿಸಲು ಸೂಚನೆ ನೀಡಲಾಗಿದೆ ಎಂದರು.

ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಡಿ.ವೇದವ್ಯಾಸ್ ಕಾಮತ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಉಪಸ್ಥಿತರಿದ್ದರು. ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಪಾರ್ಶ್ವನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News