ಶಾಲೆಗಳ ಆರಂಭ; ಸೂಕ್ತ ಸಮಯದಲ್ಲಿ ನಿರ್ಧಾರ: ಬೊಮ್ಮಾಯಿ

Update: 2020-12-03 12:22 GMT

ಉಡುಪಿ, ಡಿ.3: ರಾಜ್ಯದಲ್ಲಿ ಕೋವಿಡ್ ಯಾವ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬರಲಿದೆ ಎನ್ನುವುದರ ಆಧಾರದ ಮೇಲೆ ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ರಾಜ್ಯ ಸರಕಾರ ಸೂಕ್ತ ಸಮಯದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲಿದೆ ಎಂದು ರಾಜ್ಯ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಗುರುವಾರ ಉಡುಪಿಗೆ ಆಗಮಿಸಿದ ಸಚಿವರು, ಬೆಳಗ್ಗೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ರಾಜ್ಯದಲ್ಲಿ ಶಾಲೆಗಳನ್ನು ಕೂಡಲೇ ಪ್ರಾರಂಭಿಸುವ ಬಗ್ಗೆ ಪೋಷಕರು ಹಾಗೂ ಮಕ್ಕಳಿಂದ ಹೆಚ್ಚುತ್ತಿರುವ ಒತ್ತಡದ ಕುರಿತು ಅವರನ್ನು ಪ್ರಶ್ನಿಸಿ ದಾಗ, ಕೊರೋನಾ ಸ್ಥಿತಿಗತಿಯನ್ನು ನೋಡಿಕೊಂಡು ಎಲ್ಲ ನಿರ್ಧಾರ ಆಗುತ್ತೆ ಎಂದರು.

ಈ ಬಗ್ಗೆ ಮೇಲ್ಮನೆ ಸದಸ್ಯರು ಒತ್ತಡ ಹಾಕುತ್ತಿರುವುದು ಸಹಜ. ಕಾಲಕಾಲಕ್ಕೆ ಶಿಕ್ಷಣ ಸಚಿವರು ಫೋಷಕರು, ಶಾಲೆಗಳ ವ್ಯವಸ್ಥಾಪಕರು ಹಾಗೂ ಸರಕಾರಿ ಅಧಿಕಾರಿಗಳ ಜೊತೆ ನಿರಂತರ ಚರ್ಚೆ ನಡೆಸುತ್ತಿದ್ದಾರೆ. ಶಾಲೆ ತೆರೆಯುವ ಬಗ್ಗೆ ಪರ ಮತ್ತು ವಿರೋಧ ಅಭಿಪ್ರಾಯಗಳು ಇವೆ. ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಸರಕಾರ ಸೂಕ್ತ ಸಮಯದಲ್ಲಿ, ಸೂಕ್ತ ನಿರ್ಧಾರವನ್ನು ತೆಗೆದು ಕೊಳ್ಳಲಿದೆ ಎಂದು ಬೊಮ್ಮಾಯಿ ನುಡಿದರು.

ಸಿಎಂ ಯಡಿಯೂರಪ್ಪ, ಎಚ್.ಡಿ. ಕುಮಾರ ಸ್ವಾಮಿ ಅವರನ್ನು ಭೇಟಿ ಮಾಡಿರುವ ಬಗ್ಗೆ ಪ್ರಶ್ನಿಸಿದಾಗ ಮುಖ್ಯಮಂತ್ರಿಗಳು ಯಾರನ್ನು ಬೇಕಿದ್ದರೂ ಭೇಟಿಯಾಗಬಹುದು. ಆದರೆ ಅವರ ನಡುವೆ ಏನು ಮಾತುಕತೆ ನಡೆಯಿತು ಎಂಬ ಕುರಿತು ನಾವು ವ್ಯಾಖ್ಯಾನ ಮಾಡೋದಕ್ಕೆ ಬರೋದಿಲ್ಲ ಎಂದ ಬೊಮ್ಮಾಯಿ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಗಳು ಹೈಕಮಾಂಡ್ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಬಿಜೆಪಿಯಲ್ಲಿ ಯಾವುದೇ ತಿಕ್ಕಾಟ ಗೊಂದಲ ಇಲ್ಲ. ಬಿಜೆಪಿ ರಾಷ್ಟ್ರೀಯ ಪಕ್ಷ, ರಾಷ್ಟ್ರೀಯ ನಾಯಕರು, ಹೈಕಮಾಂಡ್, ಪ್ರಧಾನಿ ಇದ್ದಾರೆ. ಎಲ್ಲರೊಂದಿಗೆ ಚರ್ಚಿಸಿ ಮಾಡುವ ಆದೇಶವೇ ಅಂತಿಮ ಎಂದರು.

ಡಿ.5ರ ಬಂದ್‌ಗೆ ಸೂಕ್ತ ಭದ್ರತೆ:  ಡಿ.5ರಂದು ನಡೆಯಲಿರುವ ಕರ್ನಾಟಕ ಬಂದ್ ಬಗ್ಗೆ ಕೇಳಿದಾಗ, ಅಂದು ಎಲ್ಲಾ ಸರಕಾರಿ ಕಚೇರಿಗಳು, ಚಟುವಟಿಕೆಗಳು ದಿನನಿತ್ಯದಂತೆ ನಡೆಯುತ್ತೆ. ಬಂದ್ ಮಾಡಬಾರದು ಎಂದು ಸುಪ್ರೀಂ ಕೋರ್ಟ್‌ದ ಸ್ಪಷ್ಟ ಆದೇಶ ಇದೆ. ಬಂದ್ ಮಾಡಿದ್ರೆ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ ಆಗುತ್ತೆ. ಬಂದ್ ಮಾಡಬೇಡಿ ಎಂದು ಸಂಘಟಕರಿಗೆ ಈಗಾಗಲೇ ಸಿಎಂ ಮನವಿ ಮಾಡಿದ್ದಾರೆ. ನಾನೂ ಸಹ ಇದೇ ಮನವಿ ಮಾಡ್ತೇನೆ. ಇಷ್ಟರ ಮೇಲೆ ಬಂದ್ ಮಾಡಿದರೆ ನಾವು ನಮ್ಮ ಕರ್ತವ್ಯ ನಿರ್ವಹಣೆಗೆ ಬೇಕಾದ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದೇವೆ. ಭದ್ರತೆಗೆ ಬೇಕಾದ ಎಲ್ಲಾ ಕ್ರಮಕೈಗೊಳ್ತೇವೆ ಎಂದು ಬೊಮ್ಮಾಯಿ ನುಡಿದರು.

ಝಾಕೀರ್ ಬಂಧನ: ಡಿಜೆ ಹಳ್ಳಿ ಕೆ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿ ಎ.ಆರ್.ಝಾಕೀರ್ ಬಂಧನವಾಗಿರುವುದು ಹೌದು. ಇಂದು ರಜೆ ಇರುವು ದರಿಂದ ನಾಳೆ ನ್ಯಾಯಾಲಯಕ್ಕೆ ಹಾಜರು ಮಾಡ್ತೇವೆ. ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವ ಪ್ರಯತ್ನ ಮಾಡ್ತೇವೆ. ಇನ್ನು ವರ್ತೂರು ಕಿಡ್ನಾಪ್ ಪ್ರಕರಣದ ಬಗ್ಗೆ ಕೋಲಾರ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ, ಸಮಗ್ರವಾಗಿ ತನಿಖೆ ಮಾಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾತ್ರಿ ಕರ್ಫ್ಯೂ ಚಿಂತನೆ ನಡೆದಿಲ್ಲ

ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ವಿಧಿಸುವ ಬಗ್ಗೆ ಸರಕಾರ ಯೋಚಿಸುತ್ತಿದೆಯೇ ಎಂದು ಗೃಹ ಸಚಿವರನ್ನು ಪ್ರಶ್ನಿಸಿದಾಗ, ಈ ವಿಷಯದ ಕುರಿತು ಇದುವರೆಗೆ ಯಾವುದೇ ಸಭೆಯನ್ನು ಕರೆದು ಚರ್ಚಿಸಿಲ್ಲ. ಹೊಸ ವರ್ಷಾಚರಣೆ ಎಲ್ಲಾ ಇರುವ ಕಾರಣ ನಮ್ಮ ಸಲಹೆಗಾರ ಸಮಿತಿ ಹಾಗೂ ತಜ್ಞರ ತಂಡ, ಜನ ಸೇರುವುದಕ್ಕೆ ಅವಕಾಶ ಬೇಡ ಎಂಬ ಸಲಹೆಯನ್ನು ನೀಡಿದೆ.

ಇದರ ಆಧಾರದ ಮೇಲೆ ಇನ್ನೆರಡು ದಿನಗಳಲ್ಲಿ ಸರಕಾರ ಒಂದು ತೀರ್ಮಾನ ತೆಗೆದುಕೊಳ್ಳಲಿದೆ. ಹೊಸ ವರ್ಷಾಚರಣೆಯ ಸಂದರ್ಭ ಜನಸಂದಣಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇದೆ. ರಾತ್ರಿ ಕರ್ಫ್ಯೂ ವಿಧಿಸದೇ ಬೇರೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬುದನ್ನು ಪರಿಶೀಲಿಸುತ್ತೇವೆ ಎಂದು ಸಚಿವರು ತಿಳಿಸಿದರು.

ಲವ್ ಜಿಹಾದ್ ವಿರುದ್ಧ ಕಾನೂನು ಬಂದೇ ಬರುತ್ತೆ

 ಲವ್ ಜಿಹಾದ್ ವಿರುದ್ಧ ಕರ್ನಾಟಕ ರಾಜ್ಯದಲ್ಲಿ ಒಂದು ಕಾನೂನು ಬಂದೇ ಬರುತ್ತದೆ. ಈ ಬಗ್ಗೆ ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಲವ್ ಜಿಹಾದ್ ವಿರುದ್ಧದ ಕಾನೂನನ್ನು ಹೇಗೆ ಜಾರಿಗೆ ತರಬೇಕು ಮತ್ತು ಯಾವ ಅಂಶಗಳನ್ನು ಒಳಗೊಂಡಿರಬೇಕೆಂಬುದರ ಬಗ್ಗೆ ಈಗ ಪರಾಮರ್ಶೆ ನಡೆಯುತ್ತಿದೆ. ಅಲಹಾಬಾದ್ ಹೈಕೋರ್ಟ್ ಲವ್ ಜಿಹಾದ್ ವಿಚಾರದಲ್ಲಿ ಆದೇಶ ಕೊಟ್ಟಿದ್ದರೆ, ಉತ್ತರ ಪ್ರದೇಶ, ಹರಿಯಾಣ ಮಧ್ಯಪ್ರದೇಶ ಕಾನೂನು ಜಾರಿಗೆ ತರುವ ಚಿಂತನೆ ನಡೆಸಿದೆ. ಇದೇ ರೀತಿಯಲ್ಲಿ ಕರ್ನಾಟಕ ಸರಕಾರ ಕೂಡ ಈ ಬಗ್ಗೆ ಚಿಂತನೆಯನ್ನು ನಡೆಸಿದೆ ಎಂದರು.

ಉಳಿದ ರಾಜ್ಯಗಳಲ್ಲಿ ಯಾವ ರೀತಿಯಲ್ಲಿ ಕಾನೂನು ತರುತಿದ್ದಾರೆ ಎಂಬ ಬಗ್ಗೆ ವಿವರಗಳನ್ನು ಪಡೆದುಕೊಳ್ಳಲು ಅಧಿಕಾರಿಗಳಿಗೆ ಹೇಳಿದ್ದೇನೆ. ರಾಜ್ಯದಲ್ಲೂ ಈ ಬಗ್ಗೆ ಕಾನೂನು ತರಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಪ್ಪಿದ್ದಾರೆ. ಮಂಗಳೂರುನಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಅವರು ಇದನ್ನು ಘೋಷಣೆ ಮಾಡಿದ್ದಾರೆ ಎಂದರು.

ನಮ್ಮಲ್ಲಿ ಈ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಇದನ್ನು ವಿರೋಧಿಸುತ್ತಿರುವ ಸಿದ್ಧರಾಮಯ್ಯ ಅವರು ಈಗಲೂ ಮೊಘಲ್ ಯುಗದಲ್ಲೇ ಬದುಕುತಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News