ವಿಕಲಚೇತನರ ಬ್ಯಾಕ್‌ಲಾಗ್ ಹುದ್ದೆ ಭರ್ತಿಗೆ ಸರಕಾರ ಬದ್ಧ: ಬೊಮ್ಮಾಯಿ

Update: 2020-12-03 13:23 GMT

ಉಡುಪಿ, ಡಿ.3: ವಿಕಲಚೇತನರ ಸಬಲೀಕರಣ ಇಲಾಖೆಗೆ ರಾಜ್ಯ ಸರಕಾರ ಸಾಕಷ್ಟು ಮಹತ್ವ ಹಾಗೂ ಮುಂದೆ ಬರುವ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಒದಗಿಸಲಿದೆ. ವಿವಿಧ ಇಲಾಖೆಗಳಲ್ಲಿರುವ ವಿಕಲಚೇತನರ ಬ್ಯಾಕ್‌ಲಾಗ್ ಹುದ್ದೆಗಳನ್ನು ಪೂರ್ಣಪ್ರಮಾಣದಲ್ಲಿ ಭರ್ತಿ ಮಾಡಲು ಸರಕಾರ ಬದ್ಧವಾಗಿದೆ. ಇದಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ರಾಜ್ಯ ಗೃಹ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಮತ್ತು ವಿಕಲಚೇತನರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ಮಿನಿಹಾಲ್‌ನಲ್ಲಿ ಆಯೋಜಿಸ ಲಾದ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಉದಾ್ಘಟಿಸಿ ಅವರು ಮಾತ ನಾಡುತ್ತಿದ್ದರು.

ಅಂಗವಿಕಲರ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲದೆ, ಪ್ರಥಮ ಪಾಶಸ್ತ್ಯ ನೀಡುವ ಕೆಲಸವನ್ನು ಸರಕಾರ ಮಾಡುತ್ತದೆ. ಅಂಗವಿಕಲ ದಿಂದ ವಿಕಲ ಚೇತನ ಎಂಬ ನಾಮ ಬದಲಾವಣೆ ಮಾತ್ರವಲ್ಲ ಅದರ ಬದುಕು ಕೂಡ ಬದಲಾಗಬೇಕಾಗಿದೆ. ಈ ನಿಟ್ಟಿನಲ್ಲಿ ವಿಕಲಚೇತನರ ಕಾರ್ಯಕ್ರಮಗಳಿಗೆ ಇನ್ನಷ್ಟು ಶಕ್ತಿ ಕೊಡುವ ಕೆಲಸನ್ನು ಮಾಡಲಾಗುವುದು ಎಂದರು.

ವಿಕಲಚೇತನರು ದೇವರ ಮಕ್ಕಳು. ಅವರ ಸೇವೆ ಮಾಡುವವರು ದೇವರ ಕೃಪೆಗೆ ಪಾತ್ರರಾಗುತ್ತಾರೆ. ವಿಕಲಚೇತನರ ಹಕ್ಕು ಮತ್ತು ರಕ್ಷಣೆ ಹಲವು ಕಾನೂನು ಗಳಿವೆ. ಆದರೆ ಈ ಕಾನೂನುಗಳನ್ನು ಮೀರಿ ಅವರಿಗೆ ಮಾನವೀಯತೆಯನ್ನು ತೋರಿಸಬೇಕಾದ ಅಗತ್ಯ ಹೆಚ್ಚಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ವಿಕಲಚೇತನರಿಗೆ ಅಂಗಾಂಗಗಳ ಕೊರತೆಗಿಂತ ಅವಕಾಶಗಳ ಕೊರತೆ ಎದ್ದು ಕಾಣುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ವಿವಿಧ ರಂಗಗಳಲ್ಲಿ ಇವರಿಗೆ ಅವಕಾಶಗಳನ್ನು ಕಲ್ಪಿಸಿ ಕೊಡುವ ಕೆಲಸ ಮಾಡುತ್ತಿದೆ. ವಿಕಲಚೇತನರಿಗೆ ವಿಶೇಷ ಅವಕಾಶ ಒದಗಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಹೋರಾಟವನ್ನು ಗೆಲ್ಲಲು ಮಾನವೀಯತೆ ಎಂಬ ಅಸ್ತ್ರವನ್ನು ಬಳಕೆ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.

ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘ ವೇಂದ್ರ ಕಿಣಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶೆ ಕಾವೇರಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಪಂ ಸಿಇಓ ಡಾ.ನವೀನ್ ಭಟ್, ತಾಪಂ ಅಧ್ಯಕ್ಷೆ ಸಂಧ್ಯಾ ಕಾಮತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಷಪ್ಪ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಾಧಕ ವಿಕಲಚೇತನರಾದ ಸಿಂಧೂರಿ ಹಾಗೂ ಶ್ರದ್ಧಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರತ್ನಾ ಸ್ವಾಗತಿಸಿದರು.

ವಿಶೇಷ ಶಿಕ್ಷಕರಿಂದ ಕಾರ್ಯಕ್ರಮ ಬಹಿಷ್ಕಾರ!

ರಾಜ್ಯದ ವಿಶೇಷ ಶಾಲೆಗಳ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಗೌರವಧನವನ್ನು ದ್ವಿಗುಣಗೊಳಿಸುವಂತೆ ಆಗ್ರಹಿಸಿ ಇಂದು ಉಡುಪಿಯಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಬಹಿಷ್ಕರಿಸಲಾಗಿದೆ ಎಂದು ರಾಜ್ಯ ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಸಂಘದ ಅಧ್ಯಕ್ಷೆ ಡಾ. ಕಾಂತಿ ಹರೀಶ್ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿರುವ 14 ವಿಶೇಷ ಮಕ್ಕಳ ಶಾಲೆಗಳು ಹಾಗೂ ಸುಮಾರು 200 ವಿಶೇಷ ಶಿಕ್ಷಕರು ಮತ್ತು ಶಿಕ್ಷಕೇತರಿಯರು ಸರಕಾರಿ ಕಾರ್ಯ ಕ್ರಮದಲ್ಲಿ ಭಾಗವಹಿಸದೆ ಬಹಿಷ್ಕರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News