ಜಾತಿಪದ್ಧತಿ ನಿವಾರಣೆಗೆ ದಾಖಲೆಗಳಲ್ಲಿರುವ ಜಾತಿ ಕಾಲಂ ರದ್ದುಗೊಳಿಸಿ : ಪರ್ಯಾಯ ಅದಮಾರು ಶ್ರೀ

Update: 2020-12-03 13:25 GMT

ಉಡುಪಿ, ಡಿ.3: ಸರಕಾರಕ್ಕೆ ಸಮಾಜದಲ್ಲಿ ಜಾತಿ ಪದ್ಧತಿ ನಿವಾರಣೆಯಾಗ ಬೇಕೆಂಬ ಇರಾದೆ ಇದ್ದರೆ ಮೊದಲು ಸರಕಾರಿ ದಾಖಲೆಗಳಲ್ಲಿರುವ ಜಾತಿ ಕಾಲಂನ್ನು ರದ್ದುಗೊಳಿಸುವ ಕಾರ್ಯ ಮಾಡಬೇಕು ಎಂದು ಪರ್ಯಾಯ ಅದಮಾರು ಮಠಾಧೀಶ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠ, ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮರಸ್ಯ ಗತಿವಿಧಿ ವತಿಯಿಂದ ಮಠದ ರಥಬೀದಿಯಲ್ಲಿರುವ ಕನಕ ಗುಡಿ ಎದುರು ಗುರುವಾರ ಆಯೋಜಿಸಲಾದ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿ ದ್ದರು.

ಎಲ್ಲರಿಗೂ ಸಂಸ್ಕೃತ ಭಾಷೆಯನ್ನು ಕಲಿಸುವ ಕಾರ್ಯವನ್ನು ಮಾಡಬೇಕು. ಇದರಿಂದ ಪ್ರತಿಯೊಬ್ಬರು ಶಾಸ್ತ್ರಗಳಲ್ಲಿರುವ ವಿಚಾರವನ್ನು ಸ್ವತಃ ತಾವೇ ತಿಳಿದು ಕೊಳ್ಳಲು ಸಾಧ್ಯವಾಗುತ್ತದೆ. ಕನಕದಾಸರು, ಪುರಂದರದಾಸರ ಕೀರ್ತನೆಗಳನ್ನು ಓದಿ ಅರ್ಥೈಸಿಕೊಳ್ಳಬೇಕು. ಸಾಮರಸ್ಯ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಕನಕ ಜಯಂತಿ ಆಚರಣೆ ಒಂದು ದಿನಕ್ಕೆ ಸೀಮಿತಗೊಳ್ಳದೆ ಪ್ರತಿನಿತ್ಯ ಅವರ ಸಾಹಿತ್ಯ ಅಧ್ಯಯನ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು. ಕೃಷ್ಣ ಮಠದಲ್ಲಿ ಕನಕ ದಾಸರ ಹೆಸರಿನಲ್ಲಿ ನೈವೇದ್ಯ ನೀಡಲಾಗುತ್ತಿದೆ. ಈ ಮೂಲಕ ಕನಕದಾಸರಿಗೆ ಅಗ್ರಮಾನ್ಯ ಸ್ಥಾನ ನೀಡಲಾಗಿದೆ. ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಭಜನೆ ಮಾಡುವ ಬಾಲರಾಜ್ ಎಸ್.ಪೂಜಾರ್, ಕನಕಗುಡಿ ಸ್ವಚ್ಛಗೊಳಿ ಸುವ ಚಂದ್ರಶೇಖರ್, ಪೌರಕಾರ್ಮಿಕ ಸುಧೀಂದ್ರ, ಕರಕುಶಲ ಕರ್ಮಿ ಶಾರದಾ ಅವರನ್ನು ಸನ್ಮಾನಿಸಲಾಯಿತು.

ಆರ್‌ಎಸ್‌ಎಸ್ ಮಂಗಳೂರು ವಿಭಾಗ ಸಾಮರಸ್ಯ ವೇದಿಕೆ ಸಂಯೋಜಕ ಸುರೇಶ್ ಪರ್ಕಳ ಮಾತನಾಡಿದರು. ಆರೆಸ್ಸೆಸ್ ಜಿಲ್ಲಾ ಸಂಘಚಾಲಕ್ ಪ್ರೊ.ನಾರಾಯಣ ಶೆಣೈ ಉಪಸ್ಥಿತರಿದ್ದರು. ಆರ್‌ಎಸ್‌ಎಸ್ ಸಾಮರಸ್ಯ ಕಾರ್ಯವಾಹಕ ರವಿ ಅಲೆವೂರು ಕಾರ್ಯ್ರಮಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News