ರಾಜ್ಯದಲ್ಲಿ 2.40 ಲಕ್ಷ ಸರಕಾರಿ ನೌಕರರ ಹುದ್ದೆ ಖಾಲಿ: ಎಸ್. ಷಡಾಕ್ಷರಿ

Update: 2020-12-03 13:35 GMT

ಮಂಗಳೂರು, ಡಿ.3: ರಾಜ್ಯದಲ್ಲಿ 2.40 ಲಕ್ಷ ಸರಕಾರಿ ನೌಕರರ ಹುದ್ದೆ ಖಾಲಿಯಿದ್ದು, ಅವುಗಳನ್ನು ರಾಜ್ಯ ಸರಕಾರ ಶೀಘ್ರ ಭರ್ತಿ ಮಾಡಬೇಕು ಎಂದು ಕರ್ನಾಟಕ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಸ್. ಷಡಾಕ್ಷರಿ ಆಗ್ರಹಿಸಿದರು.

ನಗರದ ದ.ಕ.ಸರಕಾರಿ ನೌಕರರ ಸಂಘದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಧಿಕ ಹುದ್ದೆಗಳು ಖಾಲಿಯಿರುವ ಕಾರಣ ಈಗ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಒತ್ತಡ ಹೆಚ್ಚಾಗುತ್ತಿದೆ. ಲೋಕಸೇವಾ ಆಯೋಗ ಸೇರಿದಂತೆ ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆ ಭರ್ತಿಗೆ ಸರಕಾರ ಕ್ರಮ ಜರುಗಿಸಬೇಕು ಎಂದರು.

ಸರಕಾರಿ ನೌಕರರಿಗೆ ಈಗಿನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಕೇಂದ್ರ ಸರಕಾರವು ತನ್ನ ಸರಕಾರಿ ನೌಕರರಿಗೆ ನೀಡುತ್ತಿರುವ ಮಾದರಿಯಲ್ಲಿ 7ನೇ ವೇತನ ಆಯೋಗದ ವರದಿ ಜಾರಿಗೊಳಿಸುವ ಮೂಲಕ ರಾಜ್ಯ ಸರಕಾರಿ ನೌಕರರಿಗೂ ಸರಿಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಭಡ್ತಿ ಹೊಂದಿದ ಶಿಕ್ಷಕರ ವೇತನ ತಾರತಮ್ಯದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ಕಡತವು ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿದೆ. ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 3 ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ರಾಜ್ಯ ಸರಕಾರವು ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸುತ್ತಿದ್ದರೂ ಅರ್ಹ ಅಭ್ಯರ್ಥಿಗಳು ಸಿಗುತ್ತಿಲ್ಲ. ಕಡ್ಡಾಯ ಶಿಕ್ಷಣ ನೀತಿ ಜಾರಿಯಲ್ಲಿರುವುದರಿಂದ ಯಾವುದೇ ಕಾರಣಕ್ಕೂ ಶಾಲೆಗಳನ್ನು ಸ್ಥಗಿತಗೊಳಿಸುವಂತಿಲ್ಲ ಎಂದರು.

ರಾಜ್ಯ ಸರಕಾರವು ಸರಕಾರಿ ನೌಕರರನ್ನು ಕೊರೋನ ವಾರಿಯರ್ಸ್‌ ಎಂದು ಘೋಷಿಸಿದೆ. ಈಗಾಗಲೇ ಸುಮಾರು 500 ಮಂದಿ ಸಂಘದ ಸದಸ್ಯರು ಕೊರೋನದಿಂದ ಮರಣ ಹೊಂದಿದ್ದಾರೆ. ಅವರ ಕುಟುಂಬಕ್ಕೆ ಸರಕಾರದಿಂದ 30 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯದ ಸರಕಾರಿ ನೌಕರರು ಒಳಹೊರ ರೋಗಿಯಾಗಿ ಸಂಪೂರ್ಣ ನಗದು ರಹಿತ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಆರೋಗ್ಯ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಈ ಯೋಜನೆಯಡಿಯಲ್ಲಿ ಎಲ್ಲಾ ವಿವಿಧ ಔಷಧಗಳು, ಮೆಡಿಕಲ್ ಇಮೇಜಿಂಗ್ ಸ್ಕ್ಯಾನಿಂಗ್ ಲ್ಯಾಬೊರೇಟರಿ ಪರೀಕ್ಷೆಗಳು ಉಚಿತವಾಗಿ ದೊರೆಯಲಿದೆ. ಈ ಯೋಜನೆಯಲ್ಲಿ ರೋಗಿಗಳಿಗೆ ವಾಹನ ಸೌಲಭ್ಯ ಹಾಗೂ ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಜಗದೀಶ್ ಗೌಡಪ್ಪ ಪಾಟೀಲ, ಜಗದೀಶ್, ರುದ್ರಪ್ಪ ಕೃಷ್ಣ, ಮೋಹನ್ ಕುಮಾರ್ ಮತ್ತಿತರರಿದ್ದರು.

ಬಂದ್‌ಗೆ ಬೆಂಬಲ ಇಲ್ಲ

ಕನ್ನಡ ಪರ ಸಂಘಟನೆಗಳು ಡಿ.5ರಂದು ಕರೆ ನೀಡಿದ ಕರ್ನಾಟಕ ಬಂದ್‌ಗೆ ಬೆಂಬಲ ನೀಡುವುದಿಲ್ಲ. ಈ ಕುರಿತು ಈವರೆಗೆ ಯಾವುದೇ ಸಂಘಟನೆಯ ಮುಖಂಡರು ನಮ್ಮನ್ನು ಸಂಪರ್ಕಿಸಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News