ಕನಕ ಜಯಂತಿ ನಾಡಹಬ್ಬವಾಗಲಿ: ಸಚಿವ ಬೊಮ್ಮಾಯಿ ಆಶಯ

Update: 2020-12-03 14:23 GMT

ಉಡುಪಿ, ಡಿ.3: ಕನಕದಾಸರು ಕ್ರಾಂತಿಕಾರರು ಹೌದು, ಸಮಾಜ ಸುಧಾಕರರೂ ಹೌದು. ಅವರ ವಿಚಾರಗಳು ಕಾಲಾತೀತ. ಅದು ಸರ್ವ ಕಾಲಕ್ಕೂ ಸಲ್ಲುವಂತದ್ದು. ಹೀಗಾಗಿ ಕನಕದಾಸರು ಸದಾ ಪ್ರಸ್ತುತ. ಆದುದರಿಂದ ಕನಕ ಜಯಂತಿ ನಾಡಹಬ್ಬವಾಗಬೇಕು ಎಂಬ ಆಶಯವನ್ನು ರಾಜ್ಯ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಕುರುಬ ಸಂಘಟನೆಗಳ ಸಹಯೋಗದಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಏರ್ಪಡಿಸಲಾದ ಕನಕದಾಸರ 533ನೇ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಅವರು ಮಾತನಾಡುತಿದ್ದರು.

ಭಕ್ತನ ಭಕ್ತಿ ದೇವರಿಗಿಂತ ದೊಡ್ಡದು ಎಂಬುದನ್ನು ಕನಕದಾಸರು ಇಡೀ ನಾಡಿಗೆ ತೋರಿಸಿಕೊಟ್ಟಿದ್ದಾರೆ. ಕನಕದಾಸರು ಭಕ್ತನನ್ನು ಶ್ರೇಷ್ಠ ಎಂದು ಸಾಬೀತು ಪಡಿಸಿದ್ದಾರೆ. ಕನಕರು ಬಸವ, ಬುದ್ಧರಂತೆ ಎಲ್ಲಾ ಕಾಲಕ್ಕೂ ಸಲ್ಲುವವರು. ಇವರ ವಿಚಾರ ಕಾಲಾತೀತ. ಅವರ ವಿಚಾರಗಳು ನಾಡಿನ ಪ್ರತಿ ಮನೆ-ಮನಗಳಲ್ಲಿ ಸ್ಥಾಪನೆಯಾಗಬೇಕು ಎಂದರು.

ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿದ ಉಡುಪಿ ಕನಕದಾಸ ಅಧ್ಯಯನ ಸಂಶೋಧನಾ ಪೀಠದ ಸಂಯೋಜಕ ಪ್ರೊ.ವರದೇಶ ಹಿರೇಗಂಗೆ ಮಾತನಾಡಿ, ಆಧ್ಯಾತ್ಮ ಚಿಂತನೆಯ ಮೂಲಕ ಮೇಲು-ಕೀಳು ಮತ್ತು ತಾರತಮ್ಯವನ್ನು ಹೋಗಲಾಡಿಸಲು ಪ್ರಯತ್ನಿಸಿದ ಮಹಾನು ಭಾವರು. ಆಧ್ಯಾತ್ಮದ ಅಂತಿಮ ಗುರಿ ಏನಿದ್ದರೂ ಅದು ಸರ್ವಸಮಾನತೆ ಎಂದು ಕನಕದಾಸರು ಪ್ರತಿಪಾದಿಸಿದ್ದರು ಎಂದರು.

ಕನಕದಾಸರು ಕಲಿಯೂ ಹೌದು ಕವಿಯೂ ಹೌದು, ಭಕ್ತನೂ ಹೌದು ವಿರಕ್ತನೂ ಹೌದು, ದಾಸನೂ ಹೌದು ದಾರ್ಶನಿಕನೂ ಹೌದು, ಬಂಡಾಯ ಕಾರನೂ ಹೌದು ಸಮಾಜಸುಧಾರಕರೂ ಹೌದು. ಸಾಮಾಜಿಕ ಹಾಗೂ ಆಧ್ಯಾತ್ಮಿಕತೆಯ ಎಳೆ ಅವರಲ್ಲಿ ಬೆರೆತಿರುವುದನ್ನು ಕಾಣುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಮೆಂಡನ್, ಪಶ್ಚಿಮ ವಲಯ ಐಜಿಪಿ ದಿವ್ಯಜ್ಯೋತಿ ರೇ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಪಂ ಸಿಇಓ ಡಾ.ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಜಿಪಂ ಅಧ್ಯಕ್ಷ ದಿನಕರಬಾಬು, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಮಟ್ಟಾರು ರತ್ನಾಕರ ಹೆಗ್ಡೆ, ರಾಘವೇಂದ್ರ ಕಿಣಿ ಹಾಗೂ ಕುರುಬ ಸಂಘಟನೆಗಳ ವಿವಿಧ ನಾಯಕರು ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News